ಪಡುಬಿದ್ರೆಯಲ್ಲಿ ಬಾರ್ ವಿರುದ್ಧ ಪ್ರತಿಭಟನೆ

Update: 2017-07-24 07:59 GMT

ಪಡುಬಿದ್ರೆ, ಜು.24: ಜನವಸತಿ ಪ್ರದೇಶ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸಮೀಪ ಆರಂಭಿಸಲಾಗಿರುವ ಬಾರ್ ವಿರುದ್ಧ ಪಡುಬಿದ್ರೆಯಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಕರ್ನಾಟಕ ರಕ್ಷಣಾ ವೇದಿಕೆ, ದಸಂಸ, ಎಸ್‌ಡಿಪಿಐ, ಎಸ್ಕೆಎಸ್ಸೆಸ್ಸೆಫ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ನಾಗರಿಕರು ಪಾಲ್ಗೊಂಡಿದ್ದರು. ಪಡುಬಿದ್ರೆ ರಾಷ್ಟ್ರೀಯ ಹೆದ್ದಾರಿಯ ಕಾರ್ಕಳ ರಾಜ್ಯ ಹೆದ್ದಾರಿಯ ಸರ್ಕಲ್‌ನಿಂದ ಆರಂಭಗೊಂಡ ಪ್ರತಿಭಟನಾ ಜಾಥಾವು ಮಸೀದಿ ರಸ್ತೆ, ಬ್ರಹ್ಮಸ್ಥಾನ ಮಾರ್ಗವಾಗಿ, ಪಡುಬಿದ್ರೆ ಪೊಲೀಸ್ ಠಾಣೆ, ಮಾರ್ಕೆಟ್ ರಸ್ತೆ, ಪಡುಬಿದ್ರೆ ಪೇಟೆಯ ಮೂಲಕ ಗ್ರಾಮ ಪಂಚಾಯತ್ ಕಚೇರಿಯವರೆಗೆ ನಡೆಯಿತು. ಬಳಿಕ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಲಾಯಿತು.

ಬಾರ್‌ನಿಂದಾಗಿ ಈ ಪರಿಸರವಾಸಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಧಾರ್ಮಿಕ ಶ್ರದ್ಧಾ ಕೇಂದ್ರವಾದ ಬ್ರಹ್ಮಸ್ಥಾನ ರಸ್ತೆ, ಅಶ್ವಥ ಕಟ್ಟೆ, ಜುಮಾ ಮಸೀದಿ, ಮದ್ರಸ, ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿವೆ. ಅಲ್ಲದೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇರುವುದರಿಂದ ಈ ಭಾಗದಲ್ಲಿ ಬಾರ್ ನಿರ್ಮಾಣಕ್ಕೆ ಅವಕಾಶ ನೀಡಿರುವುದು ಖಂಡನೀಯ. ಅಬಕಾರಿ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿಗೆ ತಪ್ಪು ಮಾಹಿತಿ ನೀಡಿದ್ದರಿಂದ ಈ ಬಾರ್ ತಲೆಯೆತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವಾರದ ಗಡುವು: 
 ಶಾಂತಿಯುತವಾಗಿರುವ ಪಡುಬಿದ್ರೆಯಲ್ಲಿ ಬಾರ್‌ನಿಂದಾಗಿ ಅಶಾಂತಿಯ ವಾತಾವರಣ ನಿರ್ಮಾಣಗೊಳ್ಳಬಹುದು. ಈ ನಿಟ್ಟಿನಲ್ಲಿ ಒಂದು ವಾರದೊಳಗೆ ಬಾರ್ ಸ್ಥಳಾಂತರಗೊಳಿಸದಿದ್ದಲ್ಲಿ ಉಗ್ರ ರೀತಿಯ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ದಸಂಸ ಮುಖಂಡ ಲೋಕೇಶ್ ಕಂಚಿನಡ್ಕ, ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ಎಸ್‌ಡಿಪಿಐ ಮುಖಂಡ ಹನೀಫ್ ಮೂಳೂರು, ನಝೀರ್ ಟೈಲರ್, ಬದ್ರುದ್ದೀನ್, ಎಸ್ಕೆಎಸ್ಸೆಸ್ಸೆಫ್ ಪಡುಬಿದ್ರೆ ಘಟಕದ ಅಧ್ಯಕ್ಷ ಬಿ.ಎಚ್.ಅಬ್ದುಲ್ ರಹ್ಮಾನ್, ಕಾರ್ಯದರ್ಶಿ ಇಲ್ಯಾಸ್, ಮುತ್ತಲಿಬ್ ಪಡುಬಿದ್ರೆ, ವಿಠಲ್ ಮಾಸ್ಟರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News