ಚೀನಿ ಸೇನೆಯ ಸಾಮರ್ಥ್ಯದ ಬಗ್ಗೆ ಭ್ರಮೆ ಬೇಡ: ಭಾರತಕ್ಕೆ ಚೀನಾ ಎಚ್ಚರಿಕೆ
ಬೀಜಿಂಗ್,ಜು.24: ಸಿಕ್ಕಿಂ ಗಡಿಯಲ್ಲಿ ಭಾರತ-ಚೀನಾ ನಡುವೆ ಸಂಘರ್ಷಾವಸ್ಥೆ ಮುಂದುವರಿದಿರುವಂತೆಯೇ, ಚೀನಾದ ರಕ್ಷಣಾ ಸಚಿವಾಲಯವು ಸೋಮವಾರ ಹೇಳಿಕೆಯೊಂದನ್ನು ನೀಡಿ, ತನ್ನ ಪ್ರಾಂತವನ್ನು ರಕ್ಷಿಸಲು ಚೀನಿ ಸೇನೆಗಿರುವ ಸಾಮರ್ಥ್ಯದ ಬಗ್ಗೆ ಯಾವುದೇ ಭ್ರಮೆಗಳನ್ನು ಇರಿಸಿಕೊಳ್ಳದಿರಿ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದೆ.
‘‘ಪರ್ವತವೊಂದನ್ನು ಅಲುಗಾಡಿಸುವುದು ಸುಲಭ. ಆದರೆ ಪೀಪಲ್ಸ್ ಲಿಬರೇಶನ್ ಆರ್ಮಿ (ಚೀನಾದ ಸೇನೆ)ಯನ್ನು ಅಲ್ಲಾಡಿಸುವುದು ತುಂಬಾ ಕಷ್ಟ’’ ಎಂದು ಚೀನಿ ರಕ್ಷಣಾ ಇಲಾಖೆಯ ವಕ್ತಾರ ವು ಕ್ವಿಯಾನ್ ಸೋಮವಾರ ಬೀಜಿಂಗ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಚೀನಾದ ಪ್ರಾಂತಗಳನ್ನು ಹಾಗೂ ಅದರ ಸಾರ್ವಭೌಮತೆಯನ್ನು ರಕ್ಷಿಲು ಚೀನಿ ಸೇನೆಗೆ ಇರುವ ಸಾಮರ್ಥ್ಯವನ್ನು ನಿರಂತರವಾಗಿ ಬಲಪಡಿಸಲಾಗುತ್ತಿದೆ ಎಂದರು.
ಪ್ರಸಕ್ತ ಬಿಕ್ಕಟ್ಟು ಬಗೆಹರಿಯಬೇಕಾದರೆ ಭಾರತೀಯ ಗಡಿಭದ್ರತಾ ಪಡೆಗಳು ಡೋಕಾ ಲಾ ಗಡಿಯಿಂದ ಹಿಂದೆ ಸರಿಯುಬೇಕೆಂಬ ಪೂರ್ವಶರತ್ತನ್ನು ಚೀನಾ ವಿಧಿಸಿರುವುದಾಗಿ ವು ತಿಳಿಸಿದರು.
ಭಾರತವು ತನ್ನಿಂದಾದ ಪ್ರಮಾದವನ್ನು ಸರಿಪಡಿಸಲು ಕಾರ್ಯಸಾಧ್ಯವಾದಂತಹ ಹೆಜ್ಜೆಗಳನ್ನಿಡಬೇಕು, ಪ್ರಚೋದನಕಾರಿಯಾಗಿ ವರ್ತಿಸುವುದನ್ನು ನಿಲ್ಲಿಸಬೇಕು ಹಾಗೂ ಗಡಿಪ್ರದೇಶದಲ್ಲಿ ಶಾಂತಿಯನ್ನು ಸಂರಕ್ಷಿಸಲು ಚೀನಾದ ಜೊತೆ ಕೈಜೋಡಿಸಬೇಕು ಎಂದು ವು ಕರೆ ನೀಡಿದರು.
ಭಾರತ, ಚೀನಾ ಹಾಗೂ ಭೂತಾನ್‌ನ ಗಡಿಗಳು ಸಂಗಮಿಸುವ ಡೋಕಾ ಲಾದಲ್ಲಿ ಚೀನಿ ಸೇನೆಯು ರಸ್ತೆ ನಿರ್ಮಾಣ ಕಾಮಗಾರಿಯನ್ನು ನಡೆಸುತ್ತಿರುವುದನ್ನು ಭಾರತವು ವಿರೋಧಿಸುತ್ತಿದೆ ಹಾಗೂ ರಸ್ತೆ ನಿರ್ಮಾಣದಿಂದ ಗಂಭೀರವಾದ ಭದ್ರತಾ ಪರಿಣಾಮಗಳಾಗಲಿವೆಯೆಂದು ಅದು ಹೇಳಿದೆ.