ಒಎನ್‌ಜಿಸಿಗೆ ಎಚ್‌ಪಿಸಿಎಲ್‌ನಲ್ಲಿಯ ಶೇರು ಮಾರಾಟ ಕುರಿತ ಸಮಿತಿಗೆ ಜೇಟ್ಲಿ ಅಧ್ಯಕ್ಷ
ಹೊಸದಿಲ್ಲಿ,ಜು.24: ಹಿಂದುಸ್ಥಾನ ತೈಲ ನಿಗಮ(ಎಚ್‌ಪಿಸಿಎಲ್)ದಲ್ಲಿನ ಸರಕಾರದ ಶೇರು ಬಂಡವಾಳವನ್ನು ತೈಲ ಮತ್ತು ನೈಸರ್ಗಿಕ ಅನಿಲ ಆಯೋಗ(ಒಎನ್‌ಜಿಸಿ)ಕ್ಕೆ ಮಾರಾಟ ಪ್ರಕ್ರಿಯೆಯ ಮೇಲೆ ನಿಗಾ ಇಡಲು ಮತ್ತು ಅದನ್ನು ತ್ವರಿತಗೊಳಿಸಲು ಮೂವರು ಸದಸ್ಯರ ಸಚಿವ ಸಮಿತಿಯ ನೇತೃತ್ವವನ್ನು ವಿತ್ತಸಚಿವ ಅರುಣ್ ಜೇಟ್ಲಿ ಅವರು ವಹಿಸಲಿದ್ದಾರೆ ಎಂದು ತೈಲ ಸಚಿವ ಧಮೇಂದ್ರ ಪ್ರಧಾನ್ ಅವರು ಸೋಮವಾರ ಲೋಕಸಭೆಯಲ್ಲಿ ತಿಳಿಸಿದರು.
ಒಎನ್‌ಜಿಸಿಯು ಸರಕಾರದ ಶೇ.51.11 ಪಾಲು ಬಂಡವಳವನ್ನು ಸ್ವಾಧೀನ ಪಡಿಸಕೊಂಡ ಬಳಿಕ ಎಚ್‌ಪಿಸಿಎಲ್ ಪ್ರತ್ಯೇಕ ಆಡಳಿತ ಮಂಡಳಿ ಮತ್ತು ಬ್ರಾಂಡ್ ಗುರುತಿನೊಂದಿಗೆ ಸಾರ್ವಜನಿಕ ಕ್ಷೇತ್ರದ ಉದ್ಯಮವಾಗಿ ಉಳಿಯಲಿದೆ. ಸದ್ಯ ಸರಕಾರದ ಪಾಲು ಬಂಡವಳದ ವೌಲ್ಯ ಸುಮಾರು 28,800 ಕೋ.ರೂ.ಗಳಾಗಿವೆ. ವಿಲೀನದ ಬಳಿಕ ಒಎನ್‌ಜಿಸಿಯ ಎಲ್ಲ ರಿಫೈನರಿಗಳು ಎಚ್‌ಪಿಸಿಎಲ್‌ನಡಿ ಬರಲಿದ್ದು, ಅದು ಭಾರತದ ಮೂರನೇ ಅತಿದೊಡ್ಡ ತೈಲ ರಿಫೈನರಿಯಾಗಿ ಹೊರಹೊಮ್ಮಲಿದೆ. ಭಾರತೀಯ ತೈಲ ನಿಗಮ(ಐಒಸಿ) ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮೊದಲ ಎರಡು ಸ್ಥಾನಗಳಲ್ಲಿವೆ.