ಮೃತ ಮಹಿಳೆಯ ವಿರುದ್ಧವೇ ‘ನಿರ್ಲಕ್ಷ್ಯತನ’ ಪ್ರಕರಣ ದಾಖಲಿಸಿದ ಪೊಲೀಸರು!
ಮುಂಬೈ, ಜು.24: ರಸ್ತೆಯಲ್ಲಿದ್ದ ಹೊಂಡ ತಪ್ಪಿಸುವ ಸಂದರ್ಭ ಸಂಭವಿಸಿದ ಅಪಘಾತದಲ್ಲಿ ಮಹಿಳಾ ಬೈಕರ್ ಒಬ್ಬರು ಮೃತಪಟ್ಟ ಘಟನೆ ಮುಂಬೈಯಿಂದ 100 ಕಿ.ಮೀ. ದೂರದ ವೈತಿ ಗ್ರಾಮದಲ್ಲಿ ನಡೆದಿದೆ.
ಬಾಂದ್ರಾ ನಿವಾಸಿ ಜಾಗೃತಿ ವಿರಾಜ್ ಹೊಗಾಲೆಯವರು ಜವ್ಹರ್ ಗೆ ತೆರಳುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿತ್ತು. ಇವರು ಇಲ್ಲಿನ ವಿಮೆನ್ ಓನ್ಲಿ ಬೈಕರ್ ಕ್ಲಬ್ ನ ಸದಸ್ಯರಾಗಿದ್ದರು.
ಬೆಳಗ್ಗೆ 9 ಗಂಟೆಯ ಸುಮಾರಿಗೆ ಬೈಕ್ ಚಲಾಯಿಸುತ್ತಿದ್ದಾಗ ವೈತಿ ಗ್ರಾಮದಲ್ಲಿ ಟ್ರಕ್ ಒಂದನ್ನು ಓವರ್ ಟೇಕ್ ಮಾಡುವಾಗ ರಸ್ತೆಯಲ್ಲಿದ್ದ ಹೊಂಡವೊಂದು ಇವರ ಗಮನಕ್ಕೆ ಬಂದಿಲ್ಲ. ಈ ಸಂದರ್ಭ ಹೊಂಡ ತಪ್ಪಿಸಲು ಹೋಗಿ ಟ್ರಕ್ ಗೆ ಢಿಕ್ಕಿ ಹೊಡೆದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟಿದ್ದರು.
ಆದರೆ ರಸ್ತೆಯನ್ನು ಸುವ್ಯವಸ್ಥಿತವಾಗಿ ಇಡದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವ ಬದಲು ಪೊಲೀಸರು ಮೃತ ಮಹಿಳೆಯ ಮೇಲೆ ನಿರ್ಲಕ್ಷ್ಯತನ ಎಂದು ಕೇಸು ದಾಖಲಿಸಿದ್ದಾರೆ.
“ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದಕ್ಕಾಗಿ ನಾವು 304 (ಎ) ಸೆಕ್ಷನ್ ಅಡಿ ಹೋಗಲ್ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಅವರು ಬೈಕ್ ಓಡಿಸುವಾಗ ಸರಿಯಾದ ದಿಕ್ಕಿಗೆ ತಿರುಗಿಸಬೇಕಾಗಿತ್ತು” ಎಂದು ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ.
ಸಾಮಾನ್ಯವಾಗಿ ದೊಡ್ಡ ವಾಹನಗಳ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಪೊಲೀಸರು ಸರಿಯಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ರಸ್ತೆ ಸುರಕ್ಷತಾ ಪರಿಣತ ಶೆಣೈ ಎಂಬವರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಹೊಂಡ ತಪ್ಪಿಸಲು ಹೋದರು ಎಂದು ಹೊಗಾಲೆಯವರನ್ನು ದೂಷಿಸಲಾಗುವುದಿಲ್ಲ. ಪಿಡಬ್ಲ್ಯುಡಿ ಅಥವಾ ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇದರ ಹೊಣೆ ಹೊರಬೇಕು. ರಸ್ತೆ ಅವ್ಯವಸ್ಥೆಯನ್ನು ಸರಿಪಡಿಸದವರೇ ನಿಜವಾಗಿಯೂ ತಪ್ಪಿತಸ್ಥರು ಎಂದು ಶೆಣೈ ಹೇಳಿದ್ದಾರೆ.