×
Ad

ಗುಜರಾತ್ ಪ್ರವಾಹ : ಗರ್ಭಿಣಿ, ನವಜಾತ ಅವಳಿ ಶಿಶುಗಳ ರಕ್ಷಿಸಿದ ವಾಯುಪಡೆ

Update: 2017-07-24 22:45 IST

ರಾಜ್‌ಕೋಟ್, ಜು.24: ಗುಜರಾತ್‌ನಲ್ಲಿ ಭಾರೀ ಮಳೆಯ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ರಾಜ್‌ಕೋಟ್ ಜಿಲ್ಲೆಯ ನಾನ ಮಾತ್ರ ಎಂಬ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿರುವ ಭಾರತೀಯ ವಾಯುಪಡೆ ಮಹಿಳೆ ಮತ್ತು ಆಕೆಯ ನವಜಾತ ಅವಳಿ ಶಿಶುಗಳನ್ನು ರಕ್ಷಿಸಿದೆ.ಅಲ್ಲದೆ ಗರ್ಭಿಣಿ ಮಹಿಳೆಯೋರ್ವರನ್ನೂ ರಕ್ಷಿಸಲಾಗಿದೆ.

ಪ್ರವಾಹದ ಕಾರಣ ಇಬ್ಬರು ಮಹಿಳೆಯರು ಸಂಕಷ್ಟದ ಸ್ಥಿತಿಯಲ್ಲಿದ್ದು ಅವರನ್ನು ತಕ್ಷಣ ತೆರವುಗೊಳಿಸಲು ನೆರವು ಬೇಕಾಗಿದೆ ಎಂಬ ಸಂದೇಶದ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯೋನ್ಮುಖವಾದ ವಾಯುಪಡೆಯ ಚೇತಕ್ ಹೆಲಿಕಾಪ್ಟರ್ ಸ್ಥಳಕ್ಕೆ ಧಾವಿಸಿದೆ. ಆ ಇಬ್ಬರು ಮಹಿಳೆಯರಲ್ಲಿ ಓರ್ವ ಮಹಿಳೆ ಅಷ್ಟರಲ್ಲೇ ಅವಳಿ ಶಿಶುಗಳಿಗೆ ಜನ್ಮ ನೀಡಿದ್ದಾರೆ. ಕೂಡಲೇ ಹೆಲಿಕಾಪ್ಟರ್‌ನಲ್ಲಿ ಬಾಣಂತಿ ಹಾಗೂ ಎರಡು ನವಜಾತ ಅವಳಿ ಶಿಶುಗಳನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿ, ಅಲ್ಲಿ ಸಿದ್ಧವಾಗಿದ್ದ ವೈದ್ಯಕೀಯ ತಂಡಕ್ಕೆ ಹಸ್ತಾಂತರಿಸಲಾಗಿದೆ.ಬಳಿಕ ಗ್ರಾಮಕ್ಕೆ ಮರಳಿ ಬಂದ ಹೆಲಿಕಾಪ್ಟರ್, ಅಲ್ಲಿ ನೆರವಿಗಾಗಿ ಕಾಯುತ್ತಿದ್ದ ಗರ್ಭಿಣಿಯನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದೆ. ಈ ಮಧ್ಯೆ, ಉತ್ತರ ಮತ್ತು ಕೇಂದ್ರ ಗುಜರಾತ್‌ನಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಸರಕಾರ ಎಚ್ಚರಿಸಿದೆ.

ಗುಜರಾತ್‌ನಲ್ಲಿ ಜೂನ್ 1ರಿಂದ ಮಳೆ ಸಂಬಂಧಿಸಿದ ಘಟನೆಯಿಂದ ಮೃತಪಟ್ಟವರ ಸಂಖ್ಯೆ 73ಕ್ಕೆ ತಲುಪಿದ್ದು, ಜುಲೈ 20ರ ಬಳಿಕ 7 ಮಂದಿ ಸಾವನ್ನಪ್ಪಿದ್ದಾರೆ. 900ಕ್ಕೂ ಹೆಚ್ಚು ಜಾನುವಾರುಗಳು ನೆರೆ ನೀರಿನಲ್ಲಿ ಕೊಚ್ಚಿಹೋಗಿವೆ ಅಥವಾ ಸಾವನ್ನಪ್ಪಿವೆ. ನೆರೆ ಹಾವಳಿಯಿಂದ ತತ್ತರಿಸಿರುವ ಪ್ರದೇಶದಲ್ಲಿ ಎನ್‌ಡಿಆರ್‌ಎಫ್, ವಾಯುಪಡೆ, ಸೇನೆ ಮತ್ತು ಇತರ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News