ಪಣಂಬೂರು ಪೊಲೀಸರ ಪ್ರಯತ್ನದಿಂದ ಮನೆ ಸೇರಿದ ಬಾಲಕ

Update: 2017-07-25 07:10 GMT

ಮಂಗಳೂರು, ಜು. 25: ಪಣಂಬೂರು ಠಾಣಾ ವ್ಯಾಪ್ತಿಯ ಮೈಂದಗುರಿ ಎಂಬಲ್ಲಿ 5ರ ಹರೆಯದ ಬಾಲಕ ಅನಾಥನಾಗಿ ಅಲೆದಾಡುತ್ತಿರುವುದನ್ನು ಕಂಡ ಸಾರ್ವಜನಿಕರು ಪಣಂಬೂರು ಬೀಟ್ ಪೊಲೀಸ್ ಸತೀಶ್ ಅವರಿಗೆ ವಿಷಯ ತಿಳಿಸುತ್ತಾರೆ. ತಕ್ಷಣ ಅಲ್ಲಿಗೆ ತೆರಳಿದ ಪೊಲೀಸ್ ಮಗುವನ್ನು ಪಣಂಬೂರು ಠಾಣೆಗೆ ಕರೆತಂದು ಮಾತಾಡಿಸಲು ಪ್ರಯತ್ನಿಸಿದರೂ ಸಫಲವಾಗುವುದಿಲ್ಲ.

ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ. ನೇತೃತ್ವದಲ್ಲಿ ಮಗುವಿನ ನಿರಂತರ ತನಿಖೆ ನಡೆಸಲಾಗುತ್ತದೆ. ಮಗು ಹಾಕಿರುವ ಅಂಗಿಯಲ್ಲಿ AVB ಶಾಲೆಯ ಲೋಗೋ ಕಂಡುಬಂದಿದ್ದು, ಗೂಗಲ್ ಸರ್ಚ್ ಮಾಡಿದಾಗ ಕೋಯಂಬತ್ತೂರುನಲ್ಲಿ ಆ ಶಾಲೆ ಇರುವುದು ಕಂಡುಬಂತಾದರೂ ಶಾಲೆಯನ್ನು ಸಂಪರ್ಕಿಸಿದರೆ ಅಲ್ಲಿ ಯಾವ ಮಗುವೂ ಕಾಣೆಯಾಗಿಲ್ಲ ಎಂಬ ಮಾಹಿತಿ ದೊರಕಿದ್ದು, ಮಗುವಿನ ಫೋಟೊ ಹಾಕಿ ಸಾಮಾಜಿಕ ಜಾಲ ತಾಣದ ಮೂಲಕ ಪೊಲೀಸರು ಪ್ರಚಾರಪಡಿಸುತ್ತಾರೆ. ಇವೆಲ್ಲದರ ಫಲವೆಂಬಂತೆ ಕಾಣೆಯಾಗಿ ಪೊಲೀಸರಿಗೆ ಸಿಕ್ಕ ಮಗು ಒಂದೇ ದಿನದಲ್ಲಿ ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರುತ್ತದೆ.

ಬಳ್ಳಾರಿಯ ಹೂವಿನಹಡಗಲಿ ತಾಲೂಕಿನ ಹಂಕ್ಲಿ ತಾಂಡಾದ ಶಮನಾಯ್ಕ-ಸುಮಿತ್ರಾ ದಂಪತಿ ಜೋಕಟ್ಟೆ ಎಚ್.ಪಿ.ಸಿ.ಎಲ್.ನಲ್ಲಿ ನೌಕರಿ ಮಾಡುತ್ತಿದ್ದಾರೆ. ಶನಿವಾರ ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಪುತ್ರ 5ರ ಹರೆಯದ ರಾಕೇಶ್ ನನ್ನು ಆತನ ದೊಡ್ಡಪ್ಪ ದೇವೇಂದ್ರಪ್ಪ ವಾಸವಿರುವ ಮಂಗಳೂರಿನ ತೋಕೂರಿನ ನಿವಾಸದಲ್ಲಿ ಬಿಟ್ಟು ಹೋಗಿದ್ದರು. ಆಟವಾಡಲು ಮನೆಯಿಂದ ಹೊರಬಂದ ಮಗುವಿಗೆ ದಾರಿತಪ್ಪಿ ದಿಕ್ಕು ತೋಚದಂತಾಗಿ ಪುನಃ ಮನೆ ಸೇರಲಾಗದೆ ಪಣಂಬೂರು ಪೊಲೀಸರ ಕೈಸೇರಿದೆ.

ಸಂಜೆ ಮಗುವನ್ನು ಹೆತ್ತವರು ಹುಡುಕಾಡುತ್ತಿದ್ದಾಗ ಠಾಣೆಯಲ್ಲಿ ಮಗು ಇರುವುದನ್ನು ಸಾರ್ವಜನಿಕರು ಅವರಿಗೆ ತಿಳಿಸಿದ ಪರಿಣಾಮ ಮಗು ರಾಕೇಶ್ ಸುರಕ್ಷಿತವಾಗಿ ಹೆತ್ತವರನ್ನು ಸೇರಿದೆ. ಮಗುವನ್ನು ಕಳಕೊಂಡು ನೊಂದಿದ್ದ ಪಾಲಕರು ಪಣಂಬೂರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿ ವಾಪಾಸು ಕರಕೊಂಡು ಹೋದರು.
 

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News