ಚಾಲಕರಹಿತ ಕಾರುಗಳಿಗೆ ಭಾರತದಲ್ಲಿ ಅವಕಾಶವಿಲ್ಲ:ಗಡ್ಕರಿ
ಹೊಸದಿಲ್ಲಿ,ಜು.25: ಚಾಲಕರಹಿತ ಕಾರುಗಳು ನಿರುದ್ಯೋಗಕ್ಕೆ ಕಾರಣವಾಗುವುದರಿಂದ ಅವುಗಳಿಗೆ ಭಾರತದಲ್ಲಿ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸ್ಪಷ್ಟಪಡಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಚಾಲನಾ ಕೌಶಲ್ಯವು 50 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗವನ್ನು ಒದಗಿಸುವುದರಿಂದ ಚಾಲಕರಹಿತ ಕಾರುಗಳಿಗೆ ಅವಕಾಶ ನೀಡುವ ಬದಲು ಸರಕಾರವು ಚಾಲಕರಿಗೆ ತರಬೇತಿ ನೀಡುವ ಬಗ್ಗೆ ಗಮನ ಹರಿಸಲಿದೆ ಎಂದು ಹೇಳಿದರು.
ದೇಶದಲ್ಲಿ 22 ಲಕ್ಷ ಚಾಲಕರ ಭಾರೀ ಕೊರತೆಯಿದೆ. ಓಲಾ,ಉಬರ್‌ನಂತಹ ಕ್ಯಾಬ್ ಸಂಘಟನೆ ಸಂಸ್ಥೆಗಳು ಈ ಕೊರತೆಯ ಲಾಭವನ್ನು ಪಡೆದುಕೊಳ್ಳುತ್ತಿವೆ. ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡುವ ಯಾವುದೇ ತಂತ್ರಜ್ಞಾನ ಅಥವಾ ನೀತಿಯನ್ನು ನಾವು ಪ್ರೋತ್ಸಾಹಿಸುವುದಿಲ್ಲ ಎಂದ ಅವರು, ಪ್ರಯಾಣಿಕರು ವಿದ್ಯುತ್ ಚಾಲಿತ ಚತುಷ್ಚಕ್ರ ವಾಹನ ಅಥವಾ ದ್ವಿಚಕ್ರ ವಾಹನಗಳಂತಹ ಯಾವುದೇ ಸಾರಿಗೆ ವಿಧಾನವನ್ನು ಆಯ್ದುಕೊಳ್ಳಲು ಅವಕಾಶವಿರುವ ಕ್ಯಾಬ್ ಸಂಘಟನೆ ವೇದಿಕೆಗಳನ್ನು ಪರಿಚಯಿಸಲು ಸರಕಾರವು ಯೋಜಿಸುತ್ತಿದೆ ಎಂದು ತಿಳಿಸಿದರು.
ಸರಕಾರವು ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸುತ್ತದೆ, ಆದರೆ ಅವುಗಳ ಆಮದಿಗೆ ಅವಕಾಶ ನೀಡುವುದಿಲ್ಲ. ಬದಲಿಗೆ ‘ಮೇಕ್ ಇನ್ ಇಂಡಿಯಾ’ ಅಭಿಯಾನ ದಡಿ ಅವುಗಳನ್ನು ತಯಾರಿಸುವಂತೆ ದೇಶದ ಎಲ್ಲ ಪ್ರಮುಖ ವಾಹನ ತಯಾರಿಕೆ ಸಂಸ್ಥೆಗಳನ್ನು ಆಗ್ರಹಿಸಲಿದೆ ಎಂದರು. ಜೊತೆಗೆ, ಎಲ್ಲ ಸಾರ್ವಜನಿಕ ಮತ್ತು ಖಾಸಗಿ ವಾಹನಗಳಲ್ಲಿ ಜಿಪಿಎಸ್ ಮತ್ತು ಸೆಟೆಲೈಟ್ ಟ್ರಾಕಿಂಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲು ಸಹ ಸರಕಾರವು ಯೋಚಿಸುತ್ತಿದೆ ಎಂದ ಅವರು, ಲಂಡನ್ ಸಾರಿಗೆಯ ಮಾದರಿಯಲ್ಲಿ ದೇಶದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ಸರಕಾರವು ಯೋಜನೆ ರೂಪಿಸುತ್ತಿದೆ ಮತ್ತು ಎಲ್ಲ ರಾಜ್ಯಗಳಾದ್ಯಂತ 1.8 ಲಕ್ಷ ಸಾಮಾನ್ಯ ಬಸ್‌ಗಳ ಬದಲು ಐಷಾರಾಮಿ ಬಸ್‌ಗಳನ್ನು ನಿಯೋಜಿಸಲಾಗುವುದು. ಇದಕ್ಕಾಗಿ ಆರ್ಥಿಕ ನೆರವಿಗಾಗಿ ವಿಶ್ವಬ್ಯಾಂಕ್ ಮತ್ತು ಎಡಿಬಿ ಜೊತೆ ಮಾತುಕತೆಗಳು ಪ್ರಗತಿಯಲ್ಲಿವೆ. ಸಾಮಾನ್ಯ ಜನರು ಈಗಿನ ಪ್ರಯಾಣದರಗಳಿಗಿಂತ ಶೇ.40ರಷ್ಟು ಕಡಿಮೆ ಶುಲ್ಕವನ್ನು ತೆತ್ತು ಈ ಬಸ್‌ಗಳಲ್ಲಿ ಪ್ರಯಾಣಿಸಬಹುದಾಗಿದೆ ಎಂದು ತಿಳಿಸಿದರು.
ವಿಮಾನಗಳಲ್ಲಿರುವಂತಹ ಸೌಲಭ್ಯಗಳನ್ನು ಹೊಂದಿರುವ ಡಬಲ್ ಡೆಕರ್ ಮತ್ತು ಇತರ ಐಷಾರಾಮಿ ಬಸ್‌ಗಳನ್ನು ಒದಗಿಸಲಾಗುವುದು. ಇದಕ್ಕೆ ಪೂರಕವಾಗಿ ಭಾರತೀಯ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಲಾ ಗುವುದು. ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು 500 ಕೋ.ರೂ.ಗಳ ಬಂಡವಾಳ ಹೂಡಿಕೆಯೊಂದಿಗೆ ವಿಶೇಷ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದು. ಸದ್ಯಕ್ಕೆ ದೇಶಾದ್ಯಂತ ಇಂತಹ 25 ಬಸ್ ನಿಲ್ದಾಣಗಳನ್ನು ಸ್ಥಾಪಿಸಲು ಸರಕಾರವು ಯೋಜಿಸಿದೆ ಎಂದರು. ಸರಕುಗಳ ಸಾಗಾಣಿಕೆಗೆ ಅನುಕೂಲಿಸಲು ಇ-ರಿಕ್ಷಾಗಳು ಮತ್ತು ಕೈಗಾಡಿಗಳ ವಿನ್ಯಾಸಗಳಲ್ಲಿ ಬದಲಾವಣೆಗಳನ್ನು ಮಾಡಲಾಗುವುದು ಎಂದೂ ಗಡ್ಕರಿ ತಿಳಿಸಿದರು.