ನರೋಡಾ ಪಾಟಿಯಾ:ಪೆರೋಲ್‌ನಲ್ಲಿ ತೆರಳಿ ತಲೆಮರೆಸಿಕೊಂಡಿದ್ದ ದೋಷಿಗಳಿಬ್ಬರ ಸೆರೆ
ಅಹ್ಮದಾಬಾದ್,ಜು.25: ಪೆರೋಲ್ ಪಡೆದುಕೊಂಡು ಬಳಿಕ ಜೈಲಿಗೆ ಮರಳದೆ ತಲೆಮರೆಸಿಕೊಂಡಿದ್ದ 2002ರ ನರೋಡಾ ಪಾಟಿಯಾ ಹತ್ಯಾಕಾಂಡ ಪ್ರಕರಣದ ಅಪರಾಧಿಗಳಿಬ್ಬರನ್ನು ಅಹ್ಮದಾಬಾದ್ ಪೊಲೀಸರು ಸೋಮವಾರ ಇಲ್ಲಿ ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಪೆರೋಲ್ ಮೇಲೆ ಬಿಡುಗಡೆಗೊಂಡು ತಲೆಮರೆಸಿಕೊಂಡಿದ್ದ ನಾಲ್ವರ ಪೈಕಿ ಮೂವರು ವಾಪಸ್ ಜೈಲು ಸೇರಿದ್ದಾರೆ.
ಪಿಂಟು ಜಡೇಜಾ ಮತ್ತು ದಿನೇಶ ಬಾರ್ಗೆ ಬಂಧಿತ ಅಪರಾಧಿಗಳು. ಇವರನ್ನು ಅನುಕ್ರಮವಾಗಿ ಮೇ ಮತ್ತು ಜೂನ್‌ನಲ್ಲಿ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು.
ಪೆರೋಲ್‌ನಲ್ಲಿ ಬಿಡುಗಡೆಗೊಂಡಿದ್ದ ನಾಲ್ವರು ಅವಧಿ ಮುಗಿದ ಬಳಿಕವೂ ಜೈಲಿಗೆ ಮರಳದಿದ್ದ ಹಿನ್ನೆಲೆಯಲ್ಲಿ ಸಾಬರಮತಿ ಸೆಂಟ್ರಲ್ ಜೈಲಿನ ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ್ದರು. ಈ ಪೈಕಿ ಪ್ರಕಾಶ ಚಾರಾ ಎಂಬಾತ ರವಿವಾರ ಪೊಲೀಸರ ಬಲೆಗೆ ಬಿದ್ದಿದ್ದ. ಶಶಿಕಾಂತ ಕದಂ ಎಂಬಾತ ಇನ್ನೂ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲಿಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ನರೋಡಾ ಪಾಟಿಯಾ ಹತ್ಯಾಕಾಂಡ ಪ್ರಕರಣದಲ್ಲಿ ಮಾಜಿ ಬಿಜೆಪಿ ಸಚಿವೆ ಮಾಯಾ ಕೊಡ್ನಾನಿ ಮತ್ತು ಈ ನಾಲ್ವರು ಸೇರಿದಂತೆ 32 ಜನರಿಗೆ ವಿಶೇಷ ಸಿಟ್ ನ್ಯಾಯಾಲಯವು 2012,ಆ.30ರಂದು ಜೀವಾವಧಿ ಶಿಕ್ಷೆಯನ್ನು ಘೋಷಿಸಿತ್ತು.
ಶಿಕ್ಷೆಯ ವಿರುದ್ಧ ಅವರು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ.
2002,ಫೆ.28ರಂದು ಅಹ್ಮದಾಬಾದ್‌ನ ನರೋಡಾ ಪಾಟಿಯಾ ಪ್ರದೇಶದಲ್ಲಿ ಭುಗಿಲೆದ್ದಿದ್ದ ಕೋಮು ದಂಗೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ 97 ಜನರು ಕೊಲ್ಲಲ್ಪಟ್ಟಿದ್ದರು.