ಪ್ರಾಮಾಣಿಕತೆ ಇದ್ದಲ್ಲಿ ಪ್ರತಿ ಕ್ಷೇತ್ರದಲ್ಲೂ ದೇಶಪ್ರೇಮ: ವಿಕ್ರಮ್ ದತ್ತಾ

Update: 2017-07-26 07:24 GMT

ಮಂಗಳೂರು, ಜು. 26: ಸೇನೆಗೆ ಸೇರುವುದು ದೇಶ ಪ್ರೇಮವಾಗಿದ್ದರೂ, ನಮ್ಮ ಕ್ಷೇತ್ರದಲ್ಲಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಕೂಡಾ ದೇಶಪ್ರೇಮವನ್ನು ಅಭಿವ್ಯಕ್ತಗೊಳಿಸಬಹುದು ಎಂದು ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿಕ್ರಮ್ ದತ್ತಾ ಅಭಿಪ್ರಾಯಿಸಿದ್ದಾರೆ.

ಅವರು ಇಂದು ನಗರದ ಲಯನ್ಸ್ ಸೇವಾ ಮಂದಿರದಲ್ಲಿ ಕಾರ್ಗಿಲ್ ವಿಜಯ ದಿನದ ಅಂಗವಾಗಿ ಲಯನ್ಸ್ ಕ್ಲಬ್ ಮಂಗಳೂರು, ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್, ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘ ಹಾಗೂ ಕೊಂಕಣಿ ಸಾಂಸ್ಕೃತಿಕ ಸಂಘದ ವತಿಯಿಂದ ‘ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆ’ ಎಂಬ ವಿಷಯದಲ್ಲಿ ಅಂತರ್ ಶಾಲಾ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಾಗಾರವನ್ನು ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ವಸಂತ ಕುಮಾರ್ ಶೆಟ್ಟಿ ಉದ್ಘಾಟಿಸಿದರು.
ರ‍್ಯಾಂಕ್ ಗಳಿಸುವುದು ಮಾತ್ರವೇ ಸಾಧನೆಯಲ್ಲ. ಸಮಾಜದಲ್ಲಿ ಬೆರೆತು ಮೌಲ್ಯಗಳನ್ನು ಉಳಿಸಿಕೊಳ್ಳುವುದು ಬಹುದೊಡ್ಡ ಸಾಧನೆ. ವಿದ್ಯಾರ್ಥಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಭಾರತೀಯ ನೌಕಾಪಡೆಯ ಮಹೇಶ್ ನಾಗೇಶ್ ನಾಯಕ್, ಭಾರತೀಯ ಸೇನೆಯ ಎನ್. ಸುರೇಂದ್ರ ಶೆಟ್ಟಿ ಹಾಗೂ ಭಾರತೀಯ ವಾಯುಪಡೆಯ ದೇವದಾಸ್ ಎನ್. ಪೈ ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ. ಪಿ.ಎಲ್. ಧರ್ಮ ದಿಕ್ಸೂಚಿ ಭಾಷಣ ನೀಡಿದರು.

ವೇದಿಕೆಯಲ್ಲಿ ಸಿಐಎಲ್‌ನ ಕಾರ್ಯನಿವಾರ್ಹಕ ನಿರ್ದೇಶಕಿ ಸಚಿತಾ ನಂದಗೋಪಾಲ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಮಂಗಳೂರಿನ ಅಧ್ಯಕ್ಷ ವೆಂಕಟೇಶ್ ಬಾಳಿಗಾ ವಂದಿಸಿದರು. ನಂದಗೋಪಾಲ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News