ಫ್ರಾನ್ಸ್ ಕಾಡ್ಗಿಚ್ಚು: 10000 ಮಂದಿ ಸ್ಥಳಾಂತರ

Update: 2017-07-26 13:58 GMT

ಪ್ಯಾರಿಸ್, ಜು. 26: ದಕ್ಷಿಣ ಫ್ರಾನ್ಸ್‌ನಲ್ಲಿ ಹೊಸದಾಗಿ ಕಾಡ್ಗಿಚ್ಚು ಹಬ್ಬಿದ ಹಿನ್ನೆಲೆಯಲ್ಲಿ ಕನಿಷ್ಠ 10,000 ಮಂದಿಯನ್ನು ಮಂಗಳವಾರ ರಾತೋರಾತ್ರಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.

ಈ ಪ್ರದೇಶದಲ್ಲಿ ಈಗಾಗಲೇ ಕಾಡ್ಗಿಚ್ಚು ದಾಂಧಲೆ ನಡೆಸಿದ್ದು, ಭಾರೀ ಪ್ರಮಾಣದ ಅರಣ್ಯವನ್ನು ಆಹುತಿ ತೆಗೆದುಕೊಂಡಿದೆ.

ದೇಶದ ದಕ್ಷಿಣ ಭಾಗದಲ್ಲಿ ಹರಡಿರುವ ಕಾಡ್ಗಿಚ್ಚನ್ನು ನಿಯಂತ್ರಿಸಲು ಫ್ರಾನ್ಸ್ ಯುರೋಪ್‌ನ ನೆರವು ಕೋರಿದ ಒಂದು ದಿನದ ಬಳಿಕ ಹೊಸ ಕಾಡ್ಗಿಚ್ಚು ಸ್ಫೋಟಿಸಿದೆ.

‘‘ಬೆಂಕಿ ಹೊಸ ಹೊಸ ಪ್ರದೇಶಗಳಿಗೆ ಹರಡಲು ಆರಂಭಿಸಿದ ಹಿನ್ನೆಲೆಯಲ್ಲಿ ಕನಿಷ್ಠ 10,000 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಬೆಂಕಿ ಕಾಣಿಸಿಕೊಂಡಿರುವ ಪ್ರದೇಶದ ಜನಸಂಖ್ಯೆಯು ಬೇಸಿಗೆಯಲ್ಲಿ ದುಪ್ಟಟ್ಟು ಅಥವಾ ಮೂರು ಪಟ್ಟು ಆಗುತ್ತದೆ’’ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದರು.

 ಮೆಡಿಟರೇನಿಯನ್ ಕರಾವಳಿಯಲ್ಲಿರುವ ಬಾರ್ಮ್ಸ್-ಲಿಸ್-ಮಿಮೊಸಸ್ ಸಮೀಪದ ಕೋಟ್ ಡಿ’ಅಝರ್ ಪಟ್ಟಣದಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತದೆ. ರಜೆ ಕಳೆಯಲು ಬಯಸುವವರು ಇಲ್ಲಿಗೆ ಬರುತ್ತಾರೆ.

ಬೆಂಕಿ ನಂದಿಸಲು ಮಂಗಳವಾರ 4,000 ಅಗ್ನಿಶಾಮಕ ಸಿಬ್ಬಂದಿ ಮತ್ತು 19 ವಾಟರ್ ಬಾಂಬರ್‌ಗಳನ್ನು ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News