ಭೂಮಿಯ ಸಂಪನ್ಮೂಲದ ಪಾಲು ಮುಂದಿನ ವಾರ ಪೂರ್ಣ ಬಳಕೆ

Update: 2017-07-26 14:16 GMT

ಪ್ಯಾರಿಸ್, ಜು. 26: ನೀರು, ಮಣ್ಣು ಮತ್ತು ಶುದ್ಧ ಗಾಳಿ ಮುಂತಾದ ಭೂ ಸಂಪನ್ಮೂಲದ 2017ರ ಪಾಲನ್ನು ಮಾನವರು ಮುಂದಿನ ವಾರದ ವೇಳೆಗೆ ಬಳಸಿರುತ್ತಾರೆ ಎಂದು ವರದಿಯೊಂದು ಮಂಗಳವಾರ ಹೇಳಿದೆ.

‘ಭೂಮಿ ಅತಿಬಳಕೆ ದಿನ’ ಈ ವರ್ಷ ಆಗಸ್ಟ್ 2ರಂದು ಬರಲಿದೆ ಎಂದು ಡಬ್ಲುಡಬ್ಲುಎಫ್ ಮತ್ತು ಗ್ಲೋಬಲ್ ಫೂಟ್‌ಪ್ರಿಂಟ್ ನೆಟ್‌ವರ್ಕ್ ಮುಂತಾದ ಪರಿಸರ ಸಂಘಟನೆಗಳು ಹೇಳಿವೆ.

ಇದು 2016ರ ದಿನಕ್ಕಿಂತ ಒಂದು ದಿನ ಮುಂಚಿತವಾಗಿದೆ.

ಅಂದರೆ, ಮಾನವರು ಈ ವರ್ಷದ ಉಳಿದ ಅವಧಿಯನ್ನು ‘ಸಾಲವಾಗಿ’ ಬದುಕುತ್ತಾರೆ.

‘‘2017 ಆಗಸ್ಟ್ 2ರ ವೇಳೆಗೆ, ನಮ್ಮ ಗ್ರಹಕ್ಕೆ ಇಡೀ ವರ್ಷ ನವೀಕರಿಸಲು ಸಾಧ್ಯವಿರುವುದಕ್ಕಿಂತ ಹೆಚ್ಚಿನ ಸಂಪನ್ಮೂಲಗಳನ್ನು ಬಳಸಿರುತ್ತೇವೆ’’ ಎಂದು ವಿವಿಧ ಪರಿಸರ ಸಂಘಟನೆಗಳು ಹೇಳಿಕೆಯೊಂದರಲ್ಲಿ ತಿಳಿಸಿವೆ.

‘‘ಅಂದರೆ, ಸಾಗರಗಳು ಮತ್ತು ಅರಣ್ಯಗಳಿಗೆ ಒಂದು ವರ್ಷದಲ್ಲಿ ಸ್ವೀಕರಿಸಲು ಸಾಧ್ಯವಿರುವುದಕ್ಕಿಂತ ಹೆಚ್ಚಿನ ಇಂಗಾಲದ ಡೈ ಆಕ್ಸೈಡನ್ನು ಏಳು ತಿಂಗಳುಗಳಲ್ಲಿ ನಾವು ಹೊರಬಿಟ್ಟಿದ್ದೇವೆ, ನಾವು ಹೆಚ್ಚು ಮೀನುಗಳನ್ನು ಹಿಡಿದಿದ್ದೇವೆ, ಹೆಚ್ಚು ಮರಗಳನ್ನು ಕಡಿದಿದ್ದೇವೆ, ಹೆಚ್ಚು ಬೆಳೆ ಬೆಳೆದಿದ್ದೇವೆ ಹಾಗೂ ಈ ಅವಧಿಯಲ್ಲಿ ಭೂಮಿಗೆ ಉತ್ಪಾದಿಸಲು ಸಾಧ್ಯವಿರುವುದಕ್ಕಿಂತ ಹೆಚ್ಚಿನ ನೀರನ್ನು ಬಳಸಿದ್ದೇವೆ’’ ಎಂದಿದೆ.

‘ಭೂಮಿ ಅತಿಬಳಕೆ ದಿನ’ವು 1993ರಲ್ಲಿ ಅಕ್ಟೋಬರ್ 21ರಂದು ಬಂದಿದ್ದರೆ, 2003ರಲ್ಲಿ ಸೆಪ್ಟಂಬರ್ 22 ಮತ್ತು 2015ರಲ್ಲಿ ಆಗಸ್ಟ್ 13ರಂದು ಬಂದಿತ್ತು.

ಪರಿಸರದ ಮೇಲೆ ಮಾನವ ದಾಳಿ ಶೇ. 60

ತಾಪಮಾನಕ್ಕೆ ಕಾರಣವಾಗುವ ಅನಿಲಗಳು ಕಲ್ಲಿದ್ದಲು, ತೈಲ ಮತ್ತು ಅನಿಲವನ್ನು ಸುಡುವುದರಿಂದ ಹೊರಹೊಮ್ಮುತ್ತವೆ. ಇದು ಮಾನವ, ಗ್ರಹದ ಮೇಲೆ ನಡೆಸಿದ ಪರಿಸರ ದಾಳಿಯ 60 ಶೇಕಡದಷ್ಟಿದೆ ಎಂದು ಡಬ್ಲುಡಬ್ಲುಎಫ್ ಮತ್ತು ಗ್ಲೋಬಲ್ ಫೂಟ್‌ಪ್ರಿಂಟ್ ನೆಟ್‌ವರ್ಕ್ ಮುಂತಾದ ಪರಿಸರ ಸಂಘಟನೆಗಳು ಹೇಳುತ್ತವೆ.

ಜೊತೆಗೆ ಒಂದು ಶುಭ ಸುದ್ದಿಯೂ ಇದೆ. ಪ್ರತಿ ವರ್ಷವೂ ವರ್ಷದ ಆರಂಭದಲ್ಲೇ ಬರುತ್ತಿದ್ದ ‘ಭೂಮಿ ಅತಿಬಳಕೆ ದಿನ’ದ ಮುಂಚಿತವಾಗುವ ದರ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News