ನಟಿಗೆ ಲೈಂಗಿಕ ಕಿರುಕುಳ ನಿರ್ಭಯ ಪ್ರಕರಣಕ್ಕಿಂತಲೂ ಅಮಾನವೀಯ: ಪ್ರಾಸಿಕ್ಯೂಷನ್
ಮುಂಬೈ, ಜು. 26: ಜನಪ್ರಿಯ ನಟಿಯ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಜುಲೈ 10ರಂದು ಅಲುವಾ ಪೊಲೀಸರು ಮಲಯಾಳಂ ನಟ ದಿಲೀಪ್‌ನನ್ನು ಬಂಧಿಸಿದ್ದರು. ಇದು ಮಲಯಾಳಂ ಚಿತ್ರರಂಗಕ್ಕೆ ದೊಡ್ಡ ಆಘಾತ ಉಂಟು ಮಾಡಿತ್ತು. ಪ್ರಕರಣದ ಕುರಿತು ನಮ್ಮ ಕೈಯಲ್ಲಿ ಬಲವಾದ ಪುರಾವೆಗಳಿವೆ ಎಂದು ಹೇಳುವ ಮೂಲಕ ಸರಕಾರದ ಪರ ವಕೀಲರು ಈಗ ಮತ್ತೊಂದು ಆಘಾತ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಯ ರಹಸ್ಯ ವಿಚಾರಣೆಗೆ ಅನುಮತಿ ನೀಡುವಂತೆ ಹಾಗೂ ಈ ದಾಖಲೆಗಳನ್ನು ಪ್ರತಿವಾದಿ ತಂಡಕ್ಕೆ ನೀಡದಂತೆ ಸರಕಾರದ ಪರ ವಕೀಲರು ಅಂಗಮಾಲಿ ನ್ಯಾಯಾಲಯವನ್ನು ಕೋರಿದೆ.
ಈ ಬಗ್ಗೆ ನ್ಯಾಯಾಲಯ ಇದುವರೆಗೂ ನಿರ್ಧಾರ ತೆಗೆದುಕೊಳ್ಳದೇ ಇದ್ದರೂ ನಟನ ವಿರುದ್ಧ ನಮ್ಮಲ್ಲಿ ಪ್ರಬಲ ಪುರಾವೆಗಳಿವೆ. ಭಾರತದ ಚರಿತ್ರೆಯಲ್ಲಿ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣ ಅಮಾನುಷವಾದುದು. ಇದಕ್ಕಿಂತಲೂ ಹೀನಾಯವಾದುದು ಹಾಗೂ ಆಘಾತಕಾರಿಯಾದುದು ಈ ಪ್ರಕರಣ ಎಂದು ಸರಕಾರದ ಪರ ವಕೀಲರು ಹೇಳಿದ್ದಾರೆ.
ಅಮಾನುಷ ನಿರ್ಭಯ ಗ್ಯಾಂಗ್ ರೇಪ್ ಪ್ರಕರಣಕ್ಕಿಂತಲೂ ಈ ಪ್ರಕರಣದ ಪುರಾವೆಗಳು ಆಘಾತಕಾರಿಯಾದುದು ಎಂದು ಸರಕಾರದ ಪರ ವಕೀಲರು ಅಂಗಮಾಲಿ ನ್ಯಾಯಾಲಯಕ್ಕೆ ತಿಳಿಸಿದರು.
ಇನ್ನಷ್ಟು ವಿಚಾರಣೆ ನಡೆಸುವ ಹಿನ್ನೆಲೆಯಲ್ಲಿ ದಿಲೀಪ್ ಅವರ ಕಸ್ಟಡಿ ವಿಸ್ತರಿಸಲಾಗಿದೆ. ಅವರು ಪ್ರಸ್ತುತ ಅಲುವಾ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿಯನ್ನು ಕೇರಳ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿಚಾರಣೆಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಡೆಯುತ್ತಿವೆ.
ದಿಲೀಪ್‌ನ ಪತ್ನಿ ಕಾವ್ಯಾ ಮಾಧವನ್ ಅವರನ್ನು ಪೊಲೀಸರು ಮಂಗಳವಾರ ಕೊಚ್ಚಿಯಲ್ಲಿ ವಿಚಾರಣೆ ನಡೆಸಿದರು. ವಿಚಾರಣೆ ವಿವರವನ್ನು ಇದುವರೆಗೆ ಬಹಿರಂಗಪಡಿಸಿಲ್ಲ.
ಫೆಬ್ರವರಿ 17ರಂದು ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಶೂಟಿಂಗ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ನಟಿಯನ್ನು ಅಪರಿಚಿದ ದುಷ್ಕರ್ಮಿಗಳು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ್ದರು. ದುಷ್ಕರ್ಮಿಗಳು ಕಾರನ್ನು ಹಿಂಬಾಲಿಸಿ ಅಂಗಮಾಲಿಯ ಅಥನಿ ಸಮಿಪ ತಡೆದು ನಟಿಯನ್ನು ಅಪಹರಿಸಿದ್ದರು. ಅಲ್ಲಿಂದ ಪಲರಿವಟ್ಟಂ ತಲಪುವವರೆಗೆ ನಟಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಪಲರಿವಟ್ಟಂನಲ್ಲಿ ದುಷ್ಕರ್ಮಿಗಳು ಕಾರಿನಿಂದ ಇಳಿದ ಪರಾರಿಯಾಗಿದ್ದರು. ಕಾರನ ಒಳಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ದುಷ್ಕರ್ಮಿಗಳು ವಿಡಿಯೋ ಮಾಡಿದ್ದರು.