ಸಂಸತ್ತಿನಲ್ಲಿ ಮೊಬೈಲ್ ಫೋನ್ ಬಳಕೆ: ಕ್ಷಮೆ ಯಾಚಿಸಿದ ಅನುರಾಗ್ ಠಾಕೂರ್
ಹೊಸದಿಲ್ಲಿ, ಜು. 26: ಮೊಬೈಲ್ ಫೋನ್‌ನಲ್ಲಿ ವಿಡಿಯೋ ಚಿತ್ರೀಕರಣ ನಡೆಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಸಂಸದರು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಇಂದು ಸಂಸತ್ತಿನ ಕ್ಷಮೆ ಯಾಚಿಸಿದರು.
ಎರಡು ದಿನಗಳ ಹಿಂದೆ ಲೋಕಸಭೆಯ ಕಲಾಪದ ವೇಳೆ ಮೊಬೈಲ್ ಚಿತ್ರೀಕರಣ ನಡೆಸಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಕೆಲವರು ನನ್ನ ಮೊಬೈಲ್ ಚಿತ್ರೀಕರಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದುದರಿಂದ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ ಅವರು, ತಾನು ಚಿತ್ರೀಕರಿಸಿದ ದೃಶ್ಯಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿಲ್ಲ ಎಂದರು.
ಕಳೆದ ಸೋಮವಾರ ಲೋಕಸಭೆಯಲ್ಲಿ ಕಾಗದಗಳನ್ನು ಎಸೆದ ಆರು ಮಂದಿ ಕಾಂಗ್ರೆಸ್ ಸದಸ್ಯರನ್ನು ಐದು ದಿನ ಅಮಾನತುಗೊಳಿಸಲಾಗಿತ್ತು. ಸ್ಪೀಕರ್ ಖುರ್ಚಿಯನ್ನು ಸುತ್ತುವರಿದ ಸದಸ್ಯರ ವಿಡಿಯೋವನ್ನು ಠಾಕೂರ್ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ಠಾಕೂರ್ ಸುಲಭವಾಗಿ ಪಾರಾಗಿದ್ದಾರೆ. ಆದರೆ, ಅವರು ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ಸದಸ್ಯರು ಆಗ್ರಹಿಸಿದರು.ಅನುರಾಗ್ ನೀವು ವಿಡಿಯೋ ಚಿತ್ರೀಕರಣ ಮಾಡಿದರೆ, ದಯವಿಟ್ಟು ಸದನದ ಕ್ಷಮೆ ಯಾಚಿಸಿ ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದರು.
ಠಾಗೂರ್ ತನ್ನ ವರ್ತನೆಗೆ ಕ್ಷಮೆ ಯಾಚಿಸಿದ ಬಳಿಕ, ಮಹಾಜನ್, ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ. ಇಂತಹ ತಪ್ಪುಗಳನ್ನು ಪುನರಾವರ್ತಿಸಬಾರದು ಎಂದರು.