ಪ್ರತಿವರ್ಷ ಐದು ಲಕ್ಷ ಅಪಘಾತಗಳಿಗೆ 1.5 ಲಕ್ಷ ಭಾರತೀಯರು ಬಲಿ : ಗಡ್ಕರಿ
ಹೊಸದಿಲ್ಲಿ,ಜು.27: ಪ್ರತಿ ವರ್ಷ ದೇಶದಲ್ಲಿ ಸುಮಾರು ಐದು ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು, ಒಂದೂವರೆ ಲಕ್ಷ ಜೀವಗಳು ಬಲಿಯಾಗುತ್ತಿವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಲೋಕಸಭೆಯಲ್ಲಿ ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಶೇ.4ರಷ್ಟು ಏರಿಕೆಯಾಗಿ ದ್ದರೆ, ದೇಶದ ವಾಹನ ತಯಾರಿಕೆ ಕ್ಷೇತ್ರವು ಪ್ರತಿ ವರ್ಷ ಶೇ.22ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದರು. ದೇಶದಲ್ಲಿ ಸುಮಾರು ಶೇ.30ರಷ್ಟು ನಕಲಿ ವಾಹನ ಚಾಲನಾ ಪರವಾನಿಗೆಗಳು ಚಲಾವಣೆಯಲ್ಲಿವೆ ಎಂದೂ ಅವರು ತಿಳಿಸಿದರು.
ಅಪಘಾತಗಳಲ್ಲಿ ಸಾವುಗಳ ಸಂಖ್ಯೆ ಅರ್ಧಕ್ಕೆ ತಗ್ಗುವಂತಾಗಲು ರಸ್ತೆ ಪ್ರಯಾಣವನ್ನು ಸುರಕ್ಷಿತವನ್ನಾಗಿಸುವ ಪ್ರಯತ್ನಗಳನ್ನು ಮಾಡಲಾಗಿದೆ ಎಂದರು. ತನ್ನ ಸಚಿವಾಲಯವು ಇದೇ ಮೊದಲ ಬಾರಿಗೆ ದೇಶದಲ್ಲಿರುವ ಸೇತುವೆಗಳ ಸಮೀಕ್ಷೆ ಯನ್ನು ನಡೆಸಿದ್ದು, ಒಟ್ಟು 147 ಸೇತುವೆಗಳು ದುರ್ಬಲಗೊಂಡಿವೆ. ಈ ಪೈಕಿ 33 ಸೇತುವೆಗಳು ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದರೆ, ಸುಮಾರು 50 ಸೇತುವೆಗಳು 100 ವರ್ಷಕ್ಕೂ ಹೆಚ್ಚು ಮತ್ತು 1,628 ಸೇತುವೆಗಳು 50 ವರ್ಷಕ್ಕೂ ಹಳೆಯದಾಗಿವೆ ಎಂದರು.
ಈ ಸೇತುವೆಗಳ ದುರಸ್ತಿ, ನವೀಕರಣ ಮತ್ತು ಪುನರ್‌ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುವಂತೆ ಸಂಬಂಧಿತ ಕಾರ್ಯಕಾರಿ ಏಜೆನ್ಸಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಗಡ್ಕರಿ ತಿಳಿಸಿದರು.