ನಿತೀಶ್ ಅವಕಾಶವಾದಿ: ಲಾಲು ಪ್ರಸಾದ್

Update: 2017-07-27 15:19 GMT

ರಾಂಚಿ, ಜು. 27: ಬಿಹಾರದ ಮುಖ್ಯಮಂತ್ರಿ ಅವಕಾಶವಾದಿ ಎಂದು ಜರಿದಿರುವ ಆರ್‌ಜೆಡಿಯ ಮುಖ್ಯಸ್ಥ ಲಾಲು ಪ್ರಸಾದ್ ಅವರು, ನಿತೀಶ್ ಕುಮಾರ್ ನನ್ನ ಹೆಸರು ಕೆಡಿಸಲು ಬಿಜೆಪಿಯೊಂದಿಗೆ ಕೈ ಜೋಡಿಸಿ ಆರ್‌ಜೆಡಿ ನಾಯಕರು ಹಾಗೂ ತನ್ನ ಕುಟುಂಬದ ವಿರುದ್ಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಿಂದ ದಾಳಿ ನಡೆಸಿದರು ಎಂದು ದೂರಿದ್ದಾರೆ.

ನಿತೀಶ್ ಕುಮಾರ್ ಅವರ ಬಿಜೆಪಿ ವಿರುದ್ಧದ ಆಂದೋಲನ ಒಂದು ಪೂರ್ವಯೋಜಿತ ನಾಟಕ, ಬಿಜೆಪಿ ಹಾಗೂ ಜೆಡಿ(ಯು) ನಡುವೆ ನಿಗದಿಯಾದ ಆಟದ ಒಂದು ಭಾಗ ಎಂದು ಅವರು ಹೇಳಿದರು.

 ನಿತೀಶ್ ಕುಮಾರ್ ಅವಕಾಶವಾದಿ. ಅವರು ಬಿಹಾರ್ ಜನಾದೇಶಕ್ಕೆ ಮಾತ್ರವಲ್ಲದೆ ಕೋಮು ಶಕ್ತಿ ವಿರುದ್ಧ ಹಾಗೂ ಭಾರತದ ಜನರಿಗೆ ವಿಶ್ವಾಸ ದ್ರೋಹ ಎಸಗಿದ್ದಾರೆ ಎಂದು ಅವರು ಹೇಳಿದರು.

2015ರ ಚುನಾವಣೆ ಹಿಂದೆ ತನ್ನ ಸ್ವಂತ ಸಾಮರ್ಥ್ಯದಲ್ಲಿ ವಿಜಯಿಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಆರ್‌ಜೆಡಿಗೆ ಸಮಾಜದ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಪ್ರಬಲ ಬೆಂಬಲವಿರುವುದರಿಂದ ತನ್ನ ಸಹಾಯ ಕೋರಿದರು ಎಂದು ಲಾಲು ಪ್ರಸಾದ್ ತಿಳಿಸಿದರು.

ಬಿಹಾರದ ಮಹಾಮೈತ್ರಿಯಿಂದ ನಿತೀಶ್ ಕುಮಾರ್ ಹೊರನಡೆದು, ಬಿಜೆಪಿಯೊಂದಿಗಿನ ಮೈತ್ರಿಯೊಂದಿಗೆ ಸರಕಾರ ರಚಿಸಿದ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

 ಭ್ರಷ್ಟಾಚಾರದ ಆರೋಪ ಇರುವುದರಿಂದ ಆರ್‌ಜೆಡಿಯೊಂದಿಗೆ ಆರಾಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ನಾನು ಮಹಾ ಮೈತ್ರಿಯಿಂದ ಹೊರಬಂದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಆದರೆ ನನ್ನ ಪ್ರಶ್ನೆ ಏನೆಂದರೆ ಅವರು ಯಾರು ನನ್ನನ್ನು ಪ್ರಶ್ನಿಸಲು. ಅವರು ಸಿಬಿಐ ನಿರ್ದೇಶಕರೇ ಅಥವಾ ಪೊಲೀಸ್ ಡಿಜಿಪಿಯೇ ಎಂದು ಲಾಲು ಪ್ರಸಾದ್ ಯಾದವ್ ಪ್ರಶ್ನಿಸಿದರು.

ನ್ಯಾಯಾಲಯದ ಮೆಟ್ಟಲೇರಲಿರುವ ಲಾಲು

ನಿತೀಶ್ ಕುಮಾರ್ ಅವರನ್ನು ಸರಕಾರ ರಚನೆಗೆ ಆಹ್ವಾನಿಸಿದ ಬಿಹಾರ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಲೇರುವುದಾಗಿ ಲಾಲು ಪ್ರಸಾದ್ ತಿಳಿಸಿದ್ದಾರೆ.ಈ ಬಗ್ಗೆ ತಮ್ಮ ಪಕ್ಷ ಕಾನೂನು ತಜ್ಞರ ಸಲಹೆ ಪಡೆಯುತ್ತಿರುವುದಾಗಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News