4 ವಿಧಾನಸಭಾ ಕ್ಷೇತ್ರಗಳಿಗೆ ಆ.23ರಂದು ಉಪಚುನಾವಣೆ

Update: 2017-07-27 15:53 GMT

ಹೊಸದಿಲ್ಲಿ, ಜು.27: ಗೋವ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಸ್ಪರ್ಧಿಸುವರೆಂದು ನಿರೀಕ್ಷಿಸಲಾಗಿರುವ ಪಣಜಿ ವಿಧಾನಸಭಾ ಕ್ಷೇತ್ರ ಸೇರಿದಂತೆ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಆಗಸ್ಟ್ 23ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ.

ದಿಲ್ಲಿಯ ಬವಾನ, ಗೋವದ ಪಣಜಿ ಮತ್ತು ವಾಲ್ಪೋಯ್, ಆಂಧ್ರಪ್ರದೇಶದ ನಂದ್ಯಾಲ್ - ಈ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಜುಲೈ 29ರಂದು ಅಧಿಸೂಚನೆ ಹೊರಡಿಸಲಾಗುವುದು. ಆಗಸ್ಟ್ 5 ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದ್ದು ಆಗಸ್ಟ್ 9 ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ಆಗಸ್ಟ್ 28ರಂದು ಮತ ಎಣಿಕೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

  ಬವಾನ ಕ್ಷೇತ್ರದ ‘ಆಪ್’ ಶಾಸಕರಾಗಿದ್ದ ವೇದ್‌ಪ್ರಕಾಶ್ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಈ ಕ್ಷೇತ್ರ ತೆರವಾಗಿದೆ. ಮನೋಹರ್ ಪಾರಿಕ್ಕರ್‌ಗೆ ಅವಕಾಶ ಮಾಡಿಕೊಡುವ ಸಲುವಾಗಿ ಪಣಜಿ ಕ್ಷೇತ್ರದ ಪ್ರತಿನಿಧಿಯಾಗಿದ್ದ ಬಿಜೆಪಿಯ ಸಿದ್ದಾರ್ಥ್ ಕುನ್‌ಕಲೆಂಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಸ್ಥಾನ ತೆರವಾಗಿದೆ. ವಾಲ್‌ಪೋಯ್‌ನಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ವಿಶ್ವಜೀತ್ ರಾಣೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಈ ಸ್ಥಾನ ತೆರವಾಗಿದೆ. ನಂದ್ಯಾಲ್ ಕ್ಷೇತ್ರದ ಶಾಸಕರಾಗಿದ್ದ ಟಿಡಿಪಿಯ ಸದಸ್ಯರು ನಿಧನರಾದ ಕಾರಣ ಈ ಸ್ಥಾನ ತೆರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News