ಈ ಎಟಿಎಂ ನಲ್ಲಿ ಬಂತು ಅಚ್ಛೇದಿನ್!

Update: 2017-07-27 16:35 GMT

ರಾಜಸ್ಥಾನ, ಜು.27: ಹಣ ಡ್ರಾ ಮಾಡಿದ ಗ್ರಾಹಕರಿಗೆ ಎಟಿಎಂ ಒಂದು 100 ರೂ. ಬದಲಿಗೆ 500 ರೂ. ನೀಡಿದ ಘಟನೆ ರಾಜಸ್ಥಾನದ ದೀಗ್ ನಲ್ಲಿ ನಡೆದಿದೆ. ಪರಿಣಾಮ ಆ್ಯಕ್ಸಿಸ್ ಬ್ಯಾಂಕ್ ನ ದೀಗ್ ಶಾಖೆಯ ಎಟಿಎಂನ 2 ಲಕ್ಷ ರೂ. ಎರಡೇ ಗಂಟೆಯಲ್ಲಿ ಖಾಲಿಯಾಗಿದೆ.

ಕಪ್ಪು ಹಣವನ್ನು ಭಾರತಕ್ಕೆ ತಂದು ಪ್ರತಿಯೊಬ್ಬ ನಾಗರಿಕನಿಗೆ ತಲಾ 15 ಲಕ್ಷ ರೂ. ನೀಡುತ್ತೇನೆ ಎಂಬ ಭರವಸೆಯನ್ನು ಮೋದಿ ಈಡೇರಿಸಿದ್ದು, ಉಚಿತವಾಗಿ ಹಣ ನೀಡಲಾಗುತ್ತಿದೆ ಎನ್ನುವ ವದಂತಿಯೂ ಹಬ್ಬಿತ್ತು. “ವದಂತಿಯ ನಂತರ ಎಟಿಎಂನ ಹೊರಗಡೆ ಸಾಲುಗಟ್ಟಿ ನಿಂತ ಜನರು ತಮಗೆ ಬೇಕಾದದ್ದಕ್ಕಿಂತ 5 ಪಟ್ಟು ಹೆಚ್ಚು ಹಣವನ್ನು ಪಡೆದರು” ಎಂದು ದೀಗ್ ನ ನಿವಾಸಿ ಗೌರವ್ ಸೋನಿ ಎಂಬವರು ಪ್ರತಿಕ್ರಿಯಿಸಿದ್ದಾರೆ.

ಹಣವನ್ನು ಎಟಿಎಂಗೆ ತುಂಬಿಸುವಾಗ ನಡೆದ ಅಚಾತುರ್ಯವೇ ಇದಕ್ಕೆ ಕಾರಣ ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಎಟಿಎಂಗೆ ಹಣ ತುಂಬಿಸುವಾಗ ನಿರ್ಲಕ್ಷ್ಯ ತೋರಿದವರ ವಿರುದ್ಧ ಹಿರಿಯ ಅಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗಲಿದ್ದಾರೆ. ಇದು ಬ್ಯಾಂಕ್ ಅಧಿಕಾರಿಗಳ ತಪ್ಪಲ್ಲ” ಎಂದು ಶಾಖೆಯ ಮ್ಯಾನೇಜರ್ ವಿಪುಲ್ ಖಂಡೇಲ್ವಾಲ ತಿಳಿಸಿದ್ದಾರೆ.

ಹಣ ಪಡೆದುಕೊಂಡವರಲ್ಲಿ ಹೆಚ್ಚಿನವರು ಬೇರೆ ಬ್ಯಾಂಕ್ ನ ಗ್ರಾಹಕರಾಗಿದ್ದು, ಇವರಿಂದ ಹಣವನ್ನು ಮರಳಿ ಪಡೆಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಈ ಮೊದಲು ಟೋಂಕ್ ನಲ್ಲೂ ಇದೇ ರೀತಿಯ ಘಟನೆ ನಡೆದಿದ್ದು, 100 ರೂ. ನೋಟುಗಳ ಬದಲಾಗಿ 2000 ರೂ. ನೋಟುಗಳನ್ನು ಎಟಿಎಂ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News