ಮಗಳದ್ದು ವ್ಯವಸ್ಥಿತ ಕೊಲೆ: ಕಾವ್ಯಾಳ ತಂದೆ ಆರೋಪ

Update: 2017-07-28 06:39 GMT

ಮೂಡುಬಿದಿರೆ, ಜು.28: ಕಾವ್ಯಾಳ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಕೆಯ ತಂದೆ ಲೋಕೇಶ್, ಇದೊಂದು ವ್ಯವಸ್ಥಿತ ಕೊಲೆ. ತನ್ನ ಮಗಳಿಗಾದ ಅನ್ಯಾಯ ಇನ್ನಾವ ಮಕ್ಕಳಿಗೂ ಆಗಬಾರದೆಂಬ ದಿಸೆಯಲ್ಲಿ ಇದರ ವಿರುದ್ಧ ಕಾನೂನು ಹೋರಾಟ ಕೈಗೆತ್ತಿಕೊಂಡಿರುವುದಾಗಿ ತಿಳಿಸಿದ್ದಾರೆ.

‘‘ಮಗಳ ಸಾವಿನ ಹಿಂದೆ ಕಾಲೇಜಿನ ದೈಹಿಕ ನಿರ್ದೇಶಕನ ಕೈವಾಡ ವಿರುವ ಬಗ್ಗೆ ಶಂಕೆ ಇದೆ. ಜು.19ರಂದು ರಾತ್ರಿ ಮನೆಗೆ ಕರೆ ಮಾಡಿ ಮಾತನಾಡಿದ ವೇಳೆ ಕಾವ್ಯಾ ಮರುದಿನ ಬೆಳಗ್ಗೆ 4:30ಕ್ಕೆ ಕ್ರೀಡಾ ತರಬೇತಿಗಾಗಿ ಮೈದಾನಕ್ಕೆ ತೆರಳುವುದಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಇದರ ವಾಯ್ಸಾ ರೆಕಾರ್ಡ್ ತನ್ನ ಮೊಬೈಲ್ ಫೋನ್‌ನಲ್ಲಿ ಇದೆ. ಹೀಗಿದ್ದೂ ಕಾಲೇಜಿನ ದೈಹಿಕ ನಿರ್ದೇಶಕ ಪ್ರವೀಣ್ ಮಾತ್ರ ತಾನು ಆ ರೀತಿ ಹೇಳಿಯೇ ಇಲ್ಲ ಎಂದು ನುಣುಚಿಕೊಂಡಿದ್ದಾರೆ’’ ಎಂದು ಲೋಕೇಶ್ ದೂರಿದರು.

ತನ್ನ ಮಗಳ ಸಾವಿನ ಬಗ್ಗೆ ಹೆಚ್ಚುವರಿ ತನಿಖೆ ನಡೆಸುವಂತೆ ಆಗ್ರಹಿಸಿ ಜು.24ರಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಲಿಖಿತ ದೂರು ನೀಡಿರುವುದಾಗಿ ಲೋಕೇಶ್ ತಿಳಿಸಿದ್ದಾರೆ. ಜು.19ರಂದು ರಾತ್ರಿ ಮನೆಮಂದಿಯೊಂದಿಗೆ ಮಾತನಾಡಿದ್ದ ಕಾವ್ಯಾ ಮರುದಿನ ಜು.20ರ ಸಂಜೆ ಹಾಸ್ಟೆಲ್‌ನ ತನ್ನ ಕೊಠಡಿಯಲ್ಲಿ ಸೀರೆ ಉಪಯೋಗಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾಲೇಜು ಆಡಳಿತ ಮಾಹಿತಿ ನೀಡಿದೆ. ಜು.20ರಂದು ಸಂಜೆ 7:30ಕ್ಕೆ ಈ ಘಟನೆ ನಡೆದಿರುವುದಾಗಿ ಹೇಳಿರುವ ಕಾಲೇಜು ಆಡಳಿತ ಮಂಡಳಿ ಮನೆಮಂದಿಗೆ ಈ ವಿಷಯ ತಿಳಿಸಿದ್ದು 8 ಗಂಟೆಗೆ. ಬಳಿಕ ಮುಕ್ಕಾಲು ಗಂಟೆಯಲ್ಲಿ ಕಾಲೇಜು ತಲುಪಿದ ನಮಗೆ ಕಾವ್ಯಾಳ ಮೃತದೇಹ ಕಾಣಲು ಸಿಕ್ಕಿದ್ದು ಮಾತ್ರ ಆಳ್ವಾಸ್ ಆಸ್ಪತ್ರೆಯ ಶವಾಗಾರದಲ್ಲಿ. ಮೃತದೇಹವನ್ನು ಅಷ್ಟೊಂದು ಅವಸರದಲ್ಲಿ ಶವಾಗಾರಕ್ಕೆ ತಲುಪಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸುವ ಲೋಕೇಶ್, ಶವಾಗಾರದಲ್ಲೂ ನಮಗೆ ಮಗಳ ಮೃತದೇಹವನ್ನು ಸರಿಯಾಗಿ ನೋಡಲು ಬಿಡಲಿಲ್ಲ. ನಂತರ ಮರುದಿನ ಶುಕ್ರವಾರ ಮಧ್ಯಾಹ್ನ ಮೃತದೇಹವನ್ನು ನಮ್ಮ ಸುಪರ್ದಿಗೆ ನೀಡಲಾಯಿತು ಎಂದರು.

ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯ ಹುಡುಗಿ ಅಲ್ಲ. ಆಕೆ ಕ್ರೀಡಾಪಟು. ಧೈರ್ಯವಂತೆ. ಹೀಗಾಗಿ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕೆಯನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ. ಈ ಅನ್ಯಾಯ ಜಗತ್ತಿನ ಯಾವ ಹೆತ್ತವರಿಗೂ ಆಗಬಾರದೆಂಬ ಕಾರಣಕ್ಕೆ ಇದರ ವಿರುದ್ಧ ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಲೋಕೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News