‘ಆಳ್ವಾಸ್’ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ವಿಶೇಷ ತನಿಖೆಗೆ ಪೊಲೀಸ್ ಕಮಿಷನರ್ ಆದೇಶ

Update: 2017-07-28 06:36 GMT

ಮಂಗಳೂರು, ಜು.28: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಕಾವ್ಯಾ ‘ಆತ್ಮಹತ್ಯೆ’ ಪ್ರಕರಣದ ಬಗ್ಗೆ ವಿಶೇಷ ತನಿಖೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಆದೇಶಿಸಿದ್ದಾರೆ.

ಕಾವ್ಯಾಳ ಆತ್ಮಹತ್ಯೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವರ ಹೆತ್ತವರು ನೀಡಿರುವ ದೂರು ಹಾಗೂ ಸಾರ್ವಜನಿಕವಾಗಿ ವ್ಯಕ್ತವಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಈ ತನಿಖೆಗೆ ಆದೇಶಿಸಲಾಗಿದೆ. ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದು ಆಯುಕ್ತರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಕಟೀಲು ಸಮೀಪದ ಎಕ್ಕಾರು ದೇವಗುಡ್ಡೆ ನಿವಾಸಿ ಲೋಕೇಶ್ ಎಂಬವರ ಪುತ್ರಿ, ರಾಜ್ಯಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ಕಾವ್ಯಾ ಜು.20ರಂದು ರಾತ್ರಿ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಾಸ್ಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ.

ಕ್ರೀಡಾ ಪ್ರತಿಭಾನ್ವಿತೆಯಾಗಿದ್ದ ಕಾವ್ಯಾಳ ಸಾವಿನ ಬಗ್ಗೆ ಅವರ ತಂದೆ ಲೋಕೇಶ್ ಶಂಕೆ ವ್ಯಕ್ತಪಡಿಸಿದ್ದು, ಇದೊಂದು ವ್ಯವಸ್ಥೆ ಕೊಲೆ ಎಂದು ಆಪಾದಿಸಿದ್ದು, ಈ ಬಗ್ಗೆ ಅವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಜು.24ರಂದು ದೂರು ನೀಡಿದ್ದರು. ಅಲ್ಲದೇ ಡಿವೈಎಫ್‌ಐ, ಎಸ್‌ಎಫ್‌ಐಯಂತಹ ಸಂಘಟನೆಗಳು ಕೂಡಾ ಕಾವ್ಯಾ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಇದೀಗ ಪ್ರಕರಣದ ವಿಶೇಷ ತನಿಖೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News