ಸಂತ ಅಲೋಶಿಯಸ್ ರಸ್ತೆ: ಹೆಸರು ಉಳಿಸಿಕೊಳ್ಳಲು ಅಲೋಶಿಯಸ್ ಹಳೆ ವಿದ್ಯಾರ್ಥಿಗಳ ಕ್ರಿಯಾ ಸಮಿತಿ ರಚನೆ

Update: 2017-07-28 10:12 GMT

ಮಂಗಳೂರು, ಜು.28: ನಗರದ ಕೆಥೊಲಿಕ್ ಕ್ಲಬ್‌ನಿಂದ ಅಂಬೇಡ್ಕರ್ ವೃತ್ತದವರೆಗಿನ ರಸ್ತೆಯ ಹೆಸರನ್ನು ‘ಸಂತ ಅಲೋಶಿಯಸ್ ರಸ್ತೆ’ ಎಂದು ಉಳಿಸಿಕೊಳ್ಳುವ ಉದ್ದೇಶದಿಂದ ಈ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘವು ಕ್ರಿಯಾ ಸಮಿತಿಯೊಂದನ್ನು ರಚಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರ್ಚಿಬಾಲ್ಡ್ ಮಿನೇಜಸ್, ಅಲೋಶಿಯಸ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದು ಪುನರ್ ನಾಮಕರಣ ಮಾಡುವ ಪ್ರಕ್ರಿಯೆಗೆ ನಮ್ಮ ವಿರೋಧವಿದೆ. ಆದ್ದರಿಂದ ‘ಸಂತ ಅಲೋಶಿಯಸ್ ’ಹೆಸರನ್ನು ಉಳಿಸಿಕೊಳ್ಳಲು 125 ಜನರ ಕ್ರೀಯಾ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಈ ರಸ್ತೆ ಹೆಸರಿನ ಸಮಸ್ಯೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ವಿಜಯ ಬ್ಯಾಂಕ್ ನೌಕರರ ಸಂಘ ಮತ್ತು ಸಂತ ಅಲೋಶಿಯಸ್ ಕಾಲೇಜು ಆಡಳಿತ ಮಂಡಳಿಯ ನಡುವೆ ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತಾಗಬೇಕು ಎಂದು ಅವರು ಆಗ್ರಹಿಸಿದರು.

ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿಯ ರಿಜಿಸ್ಟ್ರಾರ್ ಪ್ರೊ.ನರಹರಿ ಮಾತನಾಡಿ, ಈ ಪ್ರಕರಣದಲ್ಲಿ ಅಲೋಶಿಯಸ್ ಕಾಲೇಜು ಆಡಳಿತ ಮಂಡಳಿ ಯಾವುದೇ ಜಾತಿ ರಾಜಕಾರಣ ಮಾಡಿಲ್ಲ. ರಸ್ತೆಗೆ ಹೆಸರಿಡುವ ವಿಚಾರದಲ್ಲಿ ಯಾವುದೇ ಸಮುದಾಯದ ಜೊತೆ ಸಂಘರ್ಷಕ್ಕೂ ಸಂಸ್ಥೆ ಮುಂದಾಗಿಲ್ಲ. ಈ ಬಗ್ಗೆ ಅನಗತ್ಯ ಆರೋಪ ಮಾಡುವುದು ಸರಿಯಲ್ಲ ಎಂದರು.

137 ವರ್ಷಗಳ ಇತಿಹಾಸವನ್ನು ಹೊಂದಿರುವ ಸಂತ ಅಲೋಶಿಯಸ್ ಕಾಲೇಜಿನ ಬಳಿಯ ರಸ್ತೆಯನ್ನು ಈ ಹಿಂದೆ ‘ಸಂತ ಅಲೋಶಿಯಸ್ ರಸ್ತೆ’ ಎಂದು ಕಾಲೇಜಿನ ಶತಮಾನೋತ್ಸವ ಸಂದರ್ಭದಲ್ಲಿ ಕೇರಳದ ಹೈಕೋರ್ಟ್ ನ್ಯಾಯಾಧೀಶ ಗೋಪಾಲನ್ ನಂಬಿಯಾರ್, ಕೇಂದ್ರ ರೈಲ್ವೆ ಸಚಿವ ಸಿ.ಎಂ.ಪೂಣಚ್ಚ, ಮಾಜಿ ಶಾಸಕ ಸುಬ್ಬಯ್ಯ ಶೆಟ್ಟಿ ಹಾಗೂ ಆಗಿನ ಶಾಸಕರಾಗಿದ್ದ ದಿವಂಗತ ಬ್ಲೇಸಿಯಸ್ ಡಿಸೋಜ ನೇತೃತ್ವದಲ್ಲಿ ಹೆಸರಿಡಲಾಗಿದೆ(1979-80). ಈ ಪ್ರಕ್ರಿಯೆಯನ್ನು ಪರಿಗಣಿಸದೆ ಈ ರಸ್ತೆಗೆ ಮರು ನಾಮಕರಣ ಮಾಡಲು ಮಹಾನಗರ ಪಾಲಿಕೆಯು ವಿಜಯ ಬ್ಯಾಂಕ್ ನೌಕರರ ಸಂಘಕ್ಕೆ ಅವಕಾಶ ನೀಡಿದೆ. ಈ ವಿಚಾರವನ್ನು ಅಲೋಶಿಯಸ್ ಕಾಲೇಜಿನ ಗಮನಕ್ಕೆ ತಂದಿಲ್ಲ. ಇದು ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದು ಪ್ರೊ.ನರಹರಿ ತಿಳಿಸಿದ್ದಾರೆ.

ಮುಲ್ಕಿ ಸುಂದರಾಮ ಶೆಟ್ಟಿ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಎನ್ನುವುದು ಸಂಸ್ಥೆಗೆ ಹೆಮ್ಮೆಯ ವಿಚಾರ. ಅವರ ಹೆಸರನ್ನು ವಿಜಯ ಬ್ಯಾಂಕ್ ನೌಕರರ ಸಂಘದ ಕೋರಿಕೆಯಂತೆ ಮನಪಾ ವ್ಯಾಪ್ತಿಯ ಯಾವುದಾದರೂ ರಸ್ತೆಗೆ ನಾಮಕರಣ ಮಾಡುವುದಕ್ಕೆ ಅಲೋಶಿಯಸ್ ಕಾಲೇಜಿನ ವಿರೋಧವಿಲ್ಲ. ಆದರೆ ಈಗಾಗಲೇ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಮುಂದಿರುವ ರಸ್ತೆಗೆ ಮೊದಲಿನ ಹೆಸರನ್ನು ತೆಗೆದು ಬೇರೆ ಹೆಸರಿನ ನಾಮಕರಣ ಮಾಡುವುದು ಸರಿಯಲ್ಲ ಎಂದು ಪ್ರೊ.ನರಹರಿ ಅಭಿಪ್ರಾಯಿಸಿದರು.

ರಸ್ತೆಯ ಮರುನಾಮಕರಣದ ವಿಚಾರದಲ್ಲಿ ಉಂಟಾಗಿರುವ ಸಮಸ್ಯೆ ಬಗೆಹರಿಸಲು ಸ್ಥಳೀಯ ಶಾಸಕರು, ಮನಪಾ ಮೇಯರ್, ಜಿಲ್ಲಾ ಉಸ್ತುವಾರಿ ಸಚಿವರು ಕರೆದಿರುವ ಸಭೆಗೆ ನಾವು ಸಂಸ್ಥೆಯ ವತಿಯಿಂದ ಹಾಜರಾಗಿದ್ದೇವು. ಆದರೆ ಇತರರು ಭಾಗವಹಿಸಲಿಲ್ಲ. ಎರಡೂ ಕಡೆಯವರು ಭಾಗವಹಿಸದಿರುವುದರಿಂದ ಒಮ್ಮತದ ತೀರ್ಮಾನ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಬಗ್ಗೆ ತಪ್ಪು ಸಂದೇಶ ಮೂಡಿಸುವ ಪ್ರಯತ್ನವನ್ನು ಸಂಘಟನೆ ವಿರೋಧಿಸುತ್ತದೆ. ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳು ಮೊದಲಿನ ಹೆಸರನ್ನು ಉಳಿಸಿಕೊಳ್ಳಲು ಕಾನೂನು ನೆಲೆಯಲ್ಲಿ ಪ್ರಜಾಸತ್ತಾತ್ಮಕ ಹೋರಾಟ ನಡೆಸಲು ಕ್ರಿಯಾ ಸಮಿತಿಯನ್ನು ರಚಿಸಿದೆ ಎಂದು ಪ್ರೊ.ನರಹರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ವಂ.ಡೆನೀಶಿಯಲ್ ವಾಝ್, ಪ್ರಾಂಶುಪಾಲ ವಂ.ಪ್ರವೀಣ್ ಮಾರ್ಟಿಸ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮನ್ ಅಹ್ಮದ್, ಹಳೆ ವಿದ್ಯಾರ್ಥಿ ಸಂಘದ ಮುಖಂಡರಾದ ಸುಮಿತ್ ರಾವ್, ಮಿಶೆಲ್ ಡಿಸೋಜ, ಪ್ರೊ.ಗಣೇಶ್ ಅಮೀನ್ ಸಂಕಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News