ಆ.10: ಬೊಂದೆಲ್‌ ಸಂತ ಲಾರೆನ್ಸ್‌ ಧರ್ಮಕೇಂದ್ರದ ವಾರ್ಷಿಕ ಮಹೋತ್ಸವ

Update: 2017-07-28 11:56 GMT

ಮಂಗಳೂರು, ಜು. 28: ಬೊಂದೆಲ್‌ನ ಸಂತ ಲಾರೆನ್ಸ್‌ನ ಧರ್ಮಕೇಂದ್ರ ಮತ್ತು ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಆ.10ರಂದು ನಡೆಯಲಿದೆ.

ಹಬ್ಬದ ಪ್ರಯುಕ್ತ ಆ.1ರಿಂದ 9ರವರೆಗೆ ನವೆನಾ ಪ್ರಾರ್ಥನೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿಂದು ಚರ್ಚ ಪ್ರಧಾನ ಧರ್ಮ ಗುರುಗಳಾದ ವಂ. ಆ್ಯಂಡ್ರ ಡಿ ಸೋಜ ತಿಳಿಸಿದ್ದಾರೆ.

ಆ.1ರಂದು ಬೆಳಗ್ಗೆ 10:30ಕ್ಕೆ ನವೆನಾ ಪ್ರಾರ್ಥನೆಯ ಉದ್ಘಾಟನೆ ನಡೆಯಲಿದೆ. ಬಳಿಕ ಆ.9ರವರೆಗೆ ಪ್ರತಿದಿನ ಬೆಳಗ್ಗೆ 11 ಮತ್ತು ಸಂಜೆ 6 ಗಂಟೆಗೆ ನವೆನಾ ವಿಶೇಷ ಬಲಿಪೂಜೆ ನಡೆಯಲಿದೆ. ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಆ.9ರಂದು ನವೆನಾ ಬಲಿಪೂಜೆಯ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ವಂ. ಡಯೋನಿಸಿಯಸ್ ವಾಸ್.ಎಸ್.ಜೆ.ಪ್ರಧಾನ ಗುರುಗಳಾಗಿ ಭಾಗವಹಿಸಲಿದ್ದಾರೆ. ಇದರ ಅಂಗವಾಗಿ ಜುಲೈ 31ರಂದು ಸಂಜೆ 5:30ಕ್ಕೆ ಮೇರಿ ಹಿಲ್ ಮೌಂಟ್ ಕಾರ್ಮೆಲ್ ಶಾಲಾ ಬಳಿಯಿಂದ ಬೊಂದೆಲ್ ಚರ್ಚ್‌ಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.

ಆ.10ರಂದು ಮಹೋತ್ಸವದ ಬಲಿಪೂಜೆ ಬೆಳಗ್ಗೆ10 ಗಂಟೆಗೆ ಮಂಗಳೂರು ಧರ್ಮ ಕೇಂದ್ರದ ಧರ್ಮಾಧ್ಯಕ್ಷ ಅತೀ.ವಂ.ಡಾ.ಅಲೋಶಿಯಸ್ ಪಾವ್ಲ್ ಡಿ ಸೋಜ ಧರ್ಮ ಗುರುಳಾಗಿ ಬಲಿಪೂಜೆ ನೆರವೇರಿಸಲಿದ್ದಾರೆ.

1923ರಲ್ಲಿ ಸ್ಥಾಪನೆಯಾದ ಬೊಂದೆಲ್‌ ಚರ್ಚ್ ಪ್ರತಿವರ್ಷ ಬಡವರಿಗೆ ಚಿಕಿತ್ಸೆಗೆ, ಮನೆ ನಿರ್ಮಿಸಲು, ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುತ್ತಿದೆ. 1500 ಮಕ್ಕಳಿಗೆ ಸಂಸ್ಥೆಯ ವತಿಯಿಂದ ಶಿಕ್ಷಣ ನೀಡಲಾಗುತ್ತಿದೆ. 1050ಕ್ಕೂ ಅಧಿಕ ಕ್ರೈಸ್ತ ಕುಟುಂಬಗಳು ಚರ್ಚ್‌ನ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಎಂದು ವಂ.ಆ್ಯಂಡ್ರು ಡಿ ಸೋಜ ತಿಳಿಸಿದ್ದಾರೆ.

ಬೊಂದೆಲ್‌ ಸುದ್ದಿಗೋಷ್ಠಿಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಹೆನ್ಭರ್ಟ್ ಪಿಂಟೋ, ಹಬ್ಬದ ಸಮಿತಿಯ ಸಂಚಾಲಕ ರುಡಾಲ್ಫ್ ಪಿಂಟೋ, ಪ್ರಚಾರ ಸಮಿತಿಯ ಸಂಚಾಲಕ ಸ್ಟಾನಿ ಅಲ್ವಾರಿಸ್, ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಫ್ರಾನ್ಸಿಸ್ ವೇಗಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News