ಕಲೆ ಎಂಬುದು ಮಿಂಚಿನ ಬೆಳಕಾಗಬಾರದು: ಪ್ರೊ.ಆರ್.ವೇದವ್ಯಾಸ

Update: 2017-07-28 12:05 GMT

ಪುತ್ತೂರು, ಜು.28: ಕಲೆಗೆ ಒಂದು ವಿಶೇಷವಾದ ಸ್ಥಾನವಿದೆ. ಅದನ್ನು ಸಮರ್ಪಕವಾಗಿ ಬಳಸಿದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಕಲೆ ಎಂಬುದು ಮಿಂಚಿನ ಬೆಳಕಾಗಬಾರದು. ಬದಲಾಗಿ ಅದು ದೀಪದ ಬೆಳಕಾಗಬೇಕು. ನಾನಾ ಮೂಲಗಳಿಂದ ನಾವು ಏನನ್ನು ಕಲಿಯುತ್ತೇವೆಯೋ ಅದನ್ನು ಇನ್ನೊಬ್ಬರಿಗೆ ತಿಳಿಹೇಳುವ ಗುಣವನ್ನು ಪ್ರತಿಯೊಬ್ಬರೂ ಹೊಂದಿರಬೇಕು ಎಂದು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ಆರ್. ವೇದವ್ಯಾಸ ಅವರು ಹೇಳಿದರು.

ಪುತ್ತೂರಿನ ವಿವೇಕಾನಂದ ಕಾಲೇಜಿನ ಲಲಿತ ಕಲಾ ಸಂಘದ 2017-18ನೇ ಸಾಲಿನ ವಾರ್ಷಿಕ ಚಟುವಟಿಕೆಗಳನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಂಗೀತ, ನೃತ್ಯ ಇಂತಹ ಯಾವುದೇ ಕಲೆಯಾಗಿರಲಿ ಅದು ಸಾಕ್ಷಾತ್ಕಾರ ಹೊಂದಬೇಕಾದರೆ ಆಧ್ಯಾತ್ಮಿಕ ಭಾವನೆ ಇರಬೇಕು. ಪ್ರಯತ್ನ ಪಟ್ಟರೆ ಮಾತ್ರ ಒಂದು ಕಲೆ ಬೆಳೆಯಲು ಮತ್ತು ಬೆಳಗಲು ಸಾಧ್ಯ. ಸಂಗೀತದಲ್ಲಿ ಸೌಂದರ್ಯವಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಶಕ್ತಿಯ ಅರಿವು ನಮಗಾದಾಗ ಸಾಧನೆ ಸಾಕಾರಗೊಳ್ಳುತ್ತದೆ. ಮುಖ್ಯಪ್ರಾಣನಿಗೆ ತನ್ನ ಶಕ್ತಿಯ ಮೊದಲೇ ತಿಳಿದಿರಲಿಲ್ಲ. ಹಾಗೆಯೇ ಪ್ರತಿಯೊಬ್ಬರಲ್ಲೂ ಒಂದು ಶಕ್ತಿಯಿದೆ. ಅದನ್ನು ಹೊರತೆಗೆಯುವಂತಹ ಪ್ರಯತ್ನ ಮಾಡಬೇಕು ಎಂದು ಅವರು ತಿಳಿಸಿದರು.

ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಮ್.ಟಿ ಜಯರಾಮ್ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಲೆಯನ್ನು ಕಲಿಯಲು ಪ್ರಾಯದ ಅಗತ್ಯವಿಲ್ಲ, ತಿಳಿಯುವ ಮನಸ್ಸು, ಆಸಕ್ತಿ, ಶ್ರದ್ಧೆ ಇದ್ದರೆ ಯಾವುದನ್ನು ಬೇಕಾದರೂ ಸಾಧಿಸಬಹುದು. ಕಲೆಯಲ್ಲಿ ಆಸಕ್ತಿ ಇದ್ದರೆ ಅದನ್ನು ಮರೀಚಿಕೆಯಾಗಲು ಬಿಡದೆ ಬೆಳೆಸಿಕೊಳ್ಳಬೇಕು. ಅದು ಮುಂದೆ ಜೀವನದಲ್ಲಿ ಫಲ ಕೊಡುತ್ತದೆ. ಎಲ್ಲಾ ಕಲೆಗೂ ಅದ್ಭುತ ಶಕ್ತಿ ಇದೆ ಎಂದು ಅವರು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಶೈಕ್ಷಣಿಕ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ ಇದ್ದರು. ವಿದ್ಯಾರ್ಥಿನಿ ನಿಖಿಲಾ ಮತ್ತು ಬಳಗ ಪ್ರಾರ್ಥಿಸಿದರು. ಅಖಿಲಾ ಪಜಿಮಣ್ಣು ಆಶಯ ಗೀತೆ ಹಾಡಿದರು. ಲಲಿತ ಕಲಾ ಸಂಘದ ಸಂಚಾಲಕಿ ವಿದ್ಯಾ ಎಸ್ ಸ್ವಾಗತಿಸಿದರು. ಸಂಘದ ಮತ್ತೊಬ್ಬ ಸಂಚಾಲಕಿ ಡಾ.ದುರ್ಗರತ್ನ ವಂದಿಸಿದರು. ವಿದ್ಯಾರ್ಥಿನಿ ಕಾರ್ತಿಕ್ ಎಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News