ಯಾವುದೇ ಸವಾಲು ಎದುರಿಸಲು ಸೇನಾಪಡೆ ಸನ್ನದ್ಧ : ಜೇಟ್ಲಿ

Update: 2017-07-28 13:27 GMT

ಹೊಸದಿಲ್ಲಿ, ಜು.28: ಯಾವುದೇ ಸಂದರ್ಭದಲ್ಲಿ ಎದುರಾಗುವ ಸವಾಲನ್ನು ಎದುರಿಸಲು ಸೇನೆ ಸನ್ನದ್ಧವಾಗಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಜೇಟ್ಲಿ, ಯಾವುದೇ ಆಕಸ್ಮಿಕ ಘಟನೆಯನ್ನೂ ಎದುರಿಸಲು ಸೇನಾಪಡೆಗಳು ಸನ್ನದ್ಧವಾಗಿವೆ. ಶಸ್ತ್ರಾಸ್ತ್ರಗಳ ಕೊರತೆ ಕಂಡುಬಂದರೆ ಕೂಡಲೇ ಅದನ್ನು ಸರಿದೂಗಿಸಲಾಗುವುದು ಎಂದರು.

 ಭಾರತದ ಸೇನೆಗೆ ಶಸ್ತ್ರಾಸ್ತ್ರಗಳ ಕೊರತೆಯಿದೆ ಎಂದು ನಿಯಂತ್ರಕರು ಮತ್ತು ಮಹಾಲೆಕ್ಕಪಾಲರು ವರದಿ ನೀಡಿರುವ ಬಗ್ಗೆ ಉಲ್ಲೇಖಿಸಿದ ಅವರು, ಈ ವರದಿ ಯಾವುದೇ ನಿರ್ಧಿಷ್ಟ ಅವಧಿಗೆ ಸಂಬಂಧಿಸಿದ್ದಲ್ಲ ಎಂದರು.

 ಸಿಎಜಿ ವರದಿಯಲ್ಲಿ ಬೊಟ್ಟು ಮಾಡಲಾಗಿರುವ ಅಂಶಗಳ ಕುರಿತು ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜೇಟ್ಲಿ, ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿದ್ದರೆ ತಕ್ಷಣ ಕೈಗೊಳ್ಳಲಾಗುವುದು ಎಂದರು. ದೇಶದ ಭದ್ರತೆಗೆ ಅಗತ್ಯವಿರುವ ಶಸ್ತ್ರಾಸ್ತ್ರದ ವಿವರ ನೀಡುವಂತೆ ಸದಸ್ಯರು ಕೇಳಿದಾಗ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ವಿವರವನ್ನು ನೀಡಲಾಗದು ಎಂದು ಸಚಿವರು ಉತ್ತರಿಸಿದರು.

   ಯಾವುದೇ ಯುದ್ದೋಪಕರಣಗಳ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಮತ್ತು ಯಾರನ್ನೂ ನಿರುದ್ಯೋಗಿಯನ್ನಾಗಿ ಮಾಡುವುದಿಲ್ಲ ಎಂದು ಸಹಾಯಕ ರಕ್ಷಣಾ ಸಚಿವ ಸುಭಾಷ್ ಭಾಮ್ರೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು. ರಕ್ಷಣಾ ಕ್ಷೇತ್ರದಲ್ಲಿ ಯುದ್ಧನೀತಿಯ  ಭಾಗೀದಾರಿಕೆಯ ಕುರಿತು ತಿಳಿಸಿದ ಜೇಟ್ಲಿ, ಪಾರದರ್ಶಕ, ವಾಸ್ತವಿಕ ಮತ್ತು ಕ್ರಿಯಾತ್ಮಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಯುದ್ದೋಪಕರಣಗಳ ಉತ್ಪಾದನೆಯಲ್ಲಿ ಖಾಸಗಿ ಕ್ಷೇತ್ರದ ಕಾರ್ಖಾನೆಗಳ ಸಹಭಾಗಿತ್ವವನ್ನು ಉತ್ತೇಜಿಸಲಾಗುವುದು ಎಂದು ಹೇಳಿದರು. ಅಲ್ಲದೆ ಭಾರತೀಯ ಕೈಗಾರಿಕೆಗಳು ರಕ್ಷಣಾ ಪಡೆಗೆ ಅಗತ್ಯವಿರುವ ಯುದ್ದೋಪಕರಣಗಳನ್ನು ಉತ್ಪಾದಿಸುವ ಪ್ರಸ್ತಾವನೆಗೆ ಸರಕಾರ ಅನುಮೋದನೆ ನೀಡಿದೆ ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News