2016-17ರಲ್ಲಿ ಮೇಲ್ತೆರಿಗೆಗಳ ಮೂಲಕ ಕೇಂದ್ರ ಸರಕಾರ ಗಳಿಸಿದ ಆದಾಯ ಎಷ್ಟು ಕೋಟಿ?

Update: 2017-07-28 14:15 GMT

ಹೊಸದಿಲ್ಲಿ,ಜು.28: ಕಳೆದ ಆರ್ಥಿಕ ವರ್ಷದಲ್ಲಿ ಶಿಕ್ಷಣ, ಸ್ವಚ್ಛ ಭಾರತ, ಕೃಷಿಕಲ್ಯಾಣ ಗಳ ಮೇಲಿನ ಉಪಕರಗಳು ಸೇರಿದಂತೆ ಮೇಲ್ತೆರಿಗೆಗಳ ಮೂಲಕ 2,35,307 ಕೋ.ರೂ. ಗಳನ್ನು ಸರಕಾರವು ಸಂಗ್ರಹಿಸಿದೆ.

  ಶುಕ್ರವಾರ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ವಿಷಯವನ್ನು ತಿಳಿಸಿದ ಸಹಾಯಕ ವಿತ್ತಸಚಿವ ಸಂತೋಷಕುಮಾರ್ ಗಂಗ್ವಾರ್ ಅವರು, ಈ ಪೈಕಿ ನೇರ ತೆರಿಗೆಯಡಿ 46,939.17 ಕೋ.ರೂ.ಮತ್ತು ಪರೋಕ್ಷ ತೆರಿಗೆಯಡಿ 1,88,368.58 ಕೋ.ರೂ.ಗಳು ಸಂಗ್ರಹವಾಗಿವೆ ಎಂದು ವಿವರಿಸಿದರು.

  ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತಿದ್ದುಪಡಿಗೊಂಡ ಬೇನಾಮಿ ವಹಿವಾಟುಗಳ(ನಿಷೇಧ) ಕಾಯ್ದೆ, 2016 ಜಾರಿಗೆ ಬಂದ ಬಳಿಕ 2017,ಜೂನ್ ಮಧ್ಯದವರೆಗೆ 413 ಬೇನಾಮಿ ವಹಿವಾಟುಗಳನ್ನು ಗುರುತಿಸಲಾಗಿದೆ. 233 ಪ್ರಕರಣಗಳಲ್ಲಿ 813 ಕೋ.ರೂ.ವೌಲ್ಯದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳು, ಸ್ಥಿರಾಸ್ತಿಗಳು ಇತ್ಯಾದಿಗಳು ವಶಪಡಿಸಿಕೊಳ್ಳಲಾದ ಆಸ್ತಿಗಳಲ್ಲಿ ಸೇರಿವೆ ಎಂದು ತಿಳಿಸಿದರು.

ಜಾರಿ ನಿರ್ದೇಶನಾಲಯವು ಹಣ ಚಲುವೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ 2,349 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. 2017,ಜೂ.30ರವರೆಗೆ ಅದು ಪಿಎಂಎಲ್‌ಎ ಅಡಿ 130 ಜನರನ್ನು ಬಂಧಿಸಿದೆ ಮತ್ತು 370 ಪ್ರಾಸಿಕ್ಯೂಷನ್ ದೂರುಗಳನ್ನು ದಾಖಲಿಸಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರವಾಗಿ ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News