ಬಿಜೆಪಿ ಕಚೇರಿ, ಸಿಪಿಐ ಕಾರ್ಯದರ್ಶಿ ಪುತ್ರನ ಮನೆಗೆ ದಾಳಿ

Update: 2017-07-28 13:48 GMT

ತಿರುವನಂತಪುರಂ, ಜು.28: ಕೇರಳ ಬಿಜೆಪಿ ಘಟಕದ ಕಚೇರಿಯ ಮೇಲೆ ತಂಡವೊಂದು ಆಕ್ರಮಣ ನಡೆಸಿ ಹಾನಿ ಎಸಗಿದೆ. ಬಳಿಕ ನಡೆದ ಇನ್ನೊಂದು ಘಟನೆಯಲ್ಲಿ ಸಿಪಿಐಎಂ ಮುಖಂಡರ ಮಗನ ಮನೆಗೆ ಗುಂಪೊಂದು ದಾಳಿ ನಡೆಸಿ ಹಾನಿಗೈದಿದೆ.

  ಬಿಜೆಪಿ ಕಚೇರಿ ಮೇಲೆ ದಾಳಿ ನಡೆಸಿದ ಕೆಲವರು ಆವರಣದಲ್ಲಿ ಪಾರ್ಕ್ ಮಾಡಲಾಗಿದ್ದ ವಾಹನಗಳ ಮೇಲೆ ಕಲ್ಲು ತೂರಿ ಹಾನಿ ಎಸಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂದರ್ಭ ಕಚೇರಿ ಎದುರು ಕರ್ತವ್ಯ ನಿರತರಾಗಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ಆಡಳಿತಾರೂಢ ಸಿಪಿಐ-ಎಂನ ಯುವ ಮತ್ತು ವಿದ್ಯಾರ್ಥಿ ವಿಭಾಗದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ . ಪಕ್ಷದ ರಾಜ್ಯಾಧ್ಯಕ್ಷ ಕುಮನಮ್ ರಾಜಶೇಖರನ್ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದ ದಾಳಿ ನಡೆಸಲಾಗಿದ್ದು ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಕಾರ್ಯಕರ್ತರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಈ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು.

ಇದಕ್ಕೆ ತಿರುಗೇಟು ನೀಡಿರುವ ಸಿಪಿಐಎಂ, ಬಿಜೆಪಿಯ ಹಲವು ಮುಖಂಡರ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ, ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಬಿಜೆಪಿಯೇ ಈ ದಾಳಿ ಪ್ರಕರಣ ರೂಪಿಸಿದೆ ಎಂದು ಹೇಳಿಕೆ ನೀಡಿದೆ.

 ಈ ಘಟನೆ ನಡೆದ ಕೆಲವೇ ಗಂಟೆಗಳ ಬಳಿಕ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೊಡಿಯೆರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೆರಿ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಆದರೆ ಈ ದಾಳಿಗೂ ತನಗೂ ಸಂಬಂಧವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಈ ಎರಡೂ ಪ್ರಕರಣದ ಬಳಿಕ ಕೆಲ ಪ್ರದೇಶಗಳಲ್ಲಿ ಉದ್ವಿಗ್ನತೆ ನೆಲೆಸಿದ್ದು ಪೊಲೀಸ್ ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಹೆಚ್ಚುವರಿ ಭದ್ರತಾ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ರಾಜ್ಯದಲ್ಲಿ ಕಾನೂನು ಮತ್ತು ಶಿಸ್ತು ಪರಿಸ್ಥಿತಿ ಹದಗೆಟ್ಟಿದ್ದು ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಪಿತೂರಿ ಇದೆ. ಈ ಬಗ್ಗೆ ಮುಖ್ಯಮಂತ್ರಿ ತಕ್ಷಣ ವಿವರಣೆ ನೀಡಬೇಕು ಮತ್ತು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ರಾಜಶೇಖರನ್ ಹೇಳಿದ್ದಾರೆ. ಇದೊಂದು ಯೋಜಿತ ಪಿತೂರಿಯಾಗಿದೆ. ರಾಜಶೇಖರನ್ ಅವರನ್ನು ಹತ್ಯೆಗೈಯುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ . ಸಿಪಿಐಎಂ ರಾಜ್ಯಮುಖಂಡರ ಗಮನಕ್ಕೆ ಬಾರದೆ ಈ ರೀತಿಯ ಆಕ್ರಮಣ ನಡೆಯಲು ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಆರೋಪಿಸಿದ್ದಾರೆ.

ಸಿಪಿಎಂ ಕೌನ್ಸಿಲರ್ ಸೇರಿ ನಾಲ್ವರ ಸೆರೆ:

   ಬಿಜೆಪಿ ರಾಜ್ಯ ಸಮಿತಿಯ ಕಚೇರಿಗೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಪಿಎಂ ಕೌನ್ಸಿಲರ್ ಐ.ಪಿ.ಬಿನು, ಎಸ್‌ಎಫ್‌ಐ ಮುಖಂಡ ಪ್ರತಿನ್ ಸಾಜ್ ಕೃಷ್ಣ ಬಂಧಿತರಲ್ಲಿ ಸೇರಿದ್ದಾರೆ.

 ಘಟನೆಯ ಬಳಿಕ ಐ.ಪಿ.ಬಿನು ಹಾಗೂ ಇತರ ಇಬ್ಬರನ್ನು ಸಿಪಿಎಂ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಈ ಮಧ್ಯೆ ಹೇಳಿಕೆ ನೀಡಿರುವ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೆರಿ ಬಾಲಕೃಷ್ಣನ್, ಪಕ್ಷದ ಕಚೇರಿಯ ಮೇಲೆ ಆಕ್ರಮಣ ನಡೆಸುವುದು ಸಿಪಿಎಂನ ಕಾರ್ಯವೈಖರಿಯಲ್ಲ. ರಾಜ್ಯದಲ್ಲಿ ಎಲ್ಲಾ ಪಕ್ಷಗಳೂ ಕಾರ್ಯ ನಿರ್ವಹಿಸುವ ಹಕ್ಕನ್ನು ಹೊಂದಿದೆ ಎಂಬುದು ಪಕ್ಷದ ನಿಲುವಾಗಿದೆ ಎಂದಿದ್ದಾರೆ. ರಾಜ್ಯದ ಕಾನೂನು ಮತ್ತು ಶಿಸ್ತಿನ ಪರಿಸ್ಥಿತಿಯನ್ನು ಹಾಳುಗೆಡವಲು ಆರೆಸ್ಸೆಸ್ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುತ್ತಿದೆ ಎಂದು ಅವರು ದೂರಿದ್ದಾರೆ.

ಸಿಪಿಎಂ ಕಾರ್ಯಕರ್ತರನ್ನು ಕೆರಳಿಸಿ ರಾಜ್ಯದಲ್ಲಿ ಅಶಾಂತಿ ಹಬ್ಬಿಸುವ ಬಿಜೆಪಿ ಪ್ರಯತ್ನದ ಬಗ್ಗೆ ಪಕ್ಷದ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು ಎಂದವರು ಕರೆ ನೀಡಿದರು.

  ತಿರುವನಂತಪುರದಲ್ಲಿ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರು ಸಿಪಿಎಂ ಕಾರ್ಯಕರ್ತರ ಮೇಲೆ ಹಾಗೂ ಅವರ ಮನೆಗಳ ಮೇಲೆ ಆಕ್ರಮಣ ನಡೆಸಿದ ಬಳಿಕ ಸಮಸ್ಯೆ ಆರಂಭವಾಯಿತು ಎಂದು ಸಿಪಿಎಂ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News