‘ಬ್ರಿಕ್ಸ್’ ದೇಶಗಳ ನಡುವೆ ಸಹಕಾರಕ್ಕೆ ಚೀನಾ ಅಧ್ಯಕ್ಷ ಕರೆ

Update: 2017-07-28 14:46 GMT

ಬೀಜಿಂಗ್, ಜು. 28: ‘ಬ್ರಿಕ್ಸ್’ ದೇಶಗಳ ನಡುವೆ ಆರ್ಥಿಕತೆ, ಹಣಕಾಸು ಮತ್ತು ಭದ್ರತಾ ವಿಷಯಗಳಲ್ಲಿ ಹೆಚ್ಚಿನ ಸಹಕಾರ ಇರಬೇಕು ಎಂಬುದಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶುಕ್ರವಾರ ಕರೆ ನೀಡಿದ್ದಾರೆ.

ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಗಳನ್ನೊಳಗೊಂಡ ಐದು ದೇಶಗಳ ಗುಂಪು (ಬ್ರಿಕ್ಸ್) ‘‘ಸಂಕೀರ್ಣ ಅಂತಾರಾಷ್ಟ್ರೀಯ ರಾಜಕೀಯ ಮತ್ತು ಆರ್ಥಿಕ ಭದ್ರತಾ ಸ್ಥಿತಿಗತಿ’’ಯನ್ನು ಎದುರಿಸುತ್ತಿದೆ ಹಾಗೂ ಅವುಗಳು ಆರ್ಥಿಕ ಸಹಕಾರ, ಸಾಂಸ್ಕೃತಿಕ ವಿನಿಮಯ ಮತ್ತು ಭದ್ರತಾ ವಿಷಯಗಳಲ್ಲಿ ಹೆಚ್ಚಿನ ಪಾಲುದಾರಿಕೆ ಹೊಂದಿರಬೇಕು ಎಂದು ಕ್ಸಿ ಹೇಳಿದರು.

ಭದ್ರತಾ ವಿಷಯಗಳಲ್ಲಿನ ಸಹಕಾರ ವೃದ್ಧಿಸಲು ಐದು ದೇಶಗಳ ಗುಂಪು ಹೆಚ್ಚಿನ ಪ್ರಯತ್ನಗಳನ್ನು ನಡೆಸಿದೆ ಎಂದು ಚೀನಾ ಅಧ್ಯಕ್ಷರು ಅಭಿಪ್ರಾಯಪಟ್ಟರು.

ಉಗ್ರ ದಮನದಲ್ಲಿ ‘ಬ್ರಿಕ್ಸ್’ ಪ್ರಧಾನ ಪಾತ್ರ ವಹಿಸಲಿ: ದೋವಲ್

ಚೀನಾ ಅಧ್ಯಕ್ಷರ ಭಾಷಣಕ್ಕೂ ಮುನ್ನ, ಬ್ರಿಕ್ಸ್ ರಾಷ್ಟ್ರೀಯ ಭದ್ರತಾ ಸಲಹೆಗಾರರ 7ನೆ ಸಮ್ಮೇಳನದ ಔಪಚಾರಿಕ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಬ್ರಿಕ್ಸ್ ದೇಶಗಳು ಪ್ರಧಾನ ಪಾತ್ರ ವಹಿಸಬೇಕು ಹಾಗೂ ಪ್ರಾದೇಶಿಕ ವಿವಾದಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಕರೆನೀಡಿದರು.

  ಭಾರತ ಮತ್ತು ಚೀನಾಗಳ ನಡುವಿನ ಸಿಕ್ಕಿಂ ಗಡಿಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ನೆಲೆಸಿರುವ ಸಂಘರ್ಷದ ಹಿನ್ನೆಲೆಯಲ್ಲಿ ದೋವಲ್‌ರ ಚೀನಾ ಭೇಟಿ ಮಹತ್ವ ಪಡೆದುಕೊಂಡಿದೆ. ಚೀನಾದ ಉನ್ನತ ನಾಯಕತ್ವದೊಂದಿಗೆ ಮಾತುಕತೆ ನಡೆಸಿದ ಬಳಿಕ ಗಡಿ ಬಿಕ್ಕಟ್ಟು ಪರಿಹಾರಗೊಳ್ಳಬಹುದು ಎಂಬ ನಿರೀಕ್ಷೆಯನ್ನು ಭಾರತ ಹೊಂದಿದೆ.

 ‘‘ಹಲವು ವರ್ಷಗಳ ಅವಧಿಯಲ್ಲಿ ಬ್ರಿಕ್ಸ್ ಜಾಗತಿಕ ಮಹತ್ವದ ಗುಂಪಾಗಿ ಬೆಳೆದಿದೆ. ಜಾಗತಿಕ ಶಾಂತಿ ಮತ್ತು ಸ್ಥಿರತೆಯ ಮೇಲೆ ಪರಿಣಾಮ ಬೀರುವ ಭದ್ರತಾ ವಿಷಯಗಳ ಬಗ್ಗೆ ಚರ್ಚಿಸಲು ಬ್ರಿಕ್ಸ್ ವೇದಿಕೆಯನ್ನು ನಾವು ಬಳಸಬೇಕಾಗಿರುವುದು ಸಹಜವಾಗಿದೆ’’ ಎಂದು ಏಳನೆ ಬ್ರಿಕ್ಸ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ದೋವಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News