3 ಬಾರಿಯೂ ಅರ್ಧದಲ್ಲೇ ಅಧಿಕಾರ ಕಳೆದುಕೊಂಡ ಶರೀಫ್

Update: 2017-07-28 16:00 GMT

ಇಸ್ಲಾಮಾಬಾದ್, ಜು. 28: ‘ಪಂಜಾಬ್‌ನ ಹುಲಿ’ ಎಂಬ ಖ್ಯಾತಿ ಹೊಂದಿರುವ ನವಾಝ್ ಶರೀಫ್ ರಾಜಕೀಯವಾಗಿ ಅಸ್ಥಿರವಾಗಿರುವ ಪಾಕಿಸ್ತಾನದಲ್ಲಿ ದಾಖಲೆಯ ಮೂರು ಬಾರಿಗೆ ಪ್ರಧಾನಿಯಾಗಿದ್ದಾರೆ. ಆದರೆ, ತನ್ನ ಅಧಿಕಾರಾವಧಿಯನ್ನು ಸಂಪೂರ್ಣಗೊಳಿಸಲು ಅವರು ಪ್ರತಿ ಬಾರಿಯೂ ವಿಫಲರಾಗಿದ್ದಾರೆ.

ಮೊದಲನೆ ಬಾರಿ ಅಧ್ಯಕ್ಷರು ಅವರ ದಾರಿಗೆ ಅಡ್ಡವಾದರೆ, ಎರಡನೆ ಬಾರಿ ಸೇನೆ ಮತ್ತು ಈಗ ಮೂರನೆ ಬಾರಿ ನ್ಯಾಯಾಂಗ ಅವರ ಅಧಿಕಾರವನ್ನು ಮೊಟಕುಗೊಳಿಸಿದೆ.

2013 ಜೂನ್‌ನಲ್ಲಿ ಮೂರನೆ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ತನಗೆದುರಾದ ಎಲ್ಲ ‘ಸುನಾಮಿ’ಗಳನ್ನು ನಿಭಾಯಿಸಿ ಸುಲಲಿತವಾಗಿ ಈಜುವಲ್ಲಿ ಅವರು ಯಶಸ್ವಿಯಾಗಿದ್ದರು. ಆದರೆ, ಪನಾಮಗೇಟ್ ಹಗರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿರುವ ತೀರ್ಪು ಅವರ ರಾಜಕೀಯ ಜೀವನಕ್ಕೆ ಪ್ರಬಲ ಆಘಾತ ನೀಡಿದೆ.

ಉಕ್ಕು ಉದ್ಯಮಿ ಹಾಗೂ ರಾಜಕಾರಣಿ ಶರೀಫ್ ಮೊದಲ ಬಾರಿ 1990ರಿಂದ 1993ರವರೆಗೆ ಪ್ರಧಾನಿಯಾಗಿದ್ದರು.

ಆ ಅವಧಿಯಲ್ಲಿ ಸಂಪ್ರದಾಯವಾದಿ ಅಧ್ಯಕ್ಷ ಗುಲಾಮ್ ಇಶಾಕ್ ಖಾನ್ ಜೊತೆ ತೀವ್ರ ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಂಡರು. ಅಧ್ಯಕ್ಷರು 1993 ಎಪ್ರಿಲ್‌ನಲ್ಲಿ ತನ್ನ ವಿಶೇಷಾಧಿಕಾರವನ್ನು ಬಳಸಿ ನ್ಯಾಶನಲ್ ಅಸೆಂಬ್ಲಿಯನ್ನು ವಿಸರ್ಜಿಸಿದರು.

ಸೇನೆಯಿಂದ ಒತ್ತಡಕ್ಕೊಳಗಾದ ಹಿನ್ನೆಲೆಯಲ್ಲಿ, ಶರೀಫ್ ಜುಲೈನಲ್ಲಿ ರಾಜೀನಾಮೆ ನೀಡಿದರು. ಜೊತೆಗೆ, ಅಧ್ಯಕ್ಷರು ಕೂಡ ಅಧಿಕಾರ ಕಳೆದುಕೊಳ್ಳುವಂತೆ ನೋಡಿಕೊಂಡರು.

 ಶರೀಫ್ ಎರಡನೆ ಬಾರಿಗೆ 1997ರಲ್ಲಿ ಪಾಕ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. 1999ರಲ್ಲಿ ಸೇನಾ ಮುಖ್ಯಸ್ಥ ಪರ್ವೇಝ್ ಮುಶರ್ರಫ್ ಕ್ರಿಪ್ರಕ್ರಾಂತಿ ನಡೆಸಿ ಶರೀಫ್‌ರನ್ನು ಪದಚ್ಯುತಗೊಳಿಸಿದರು.

ಮುಶರ್ರಫ್ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಭೂಸ್ಪರ್ಶ ಮಾಡಲು ಅವಕಾಶ ನಿರಾಕರಿಸಲಾದ ಪ್ರಕರಣದಲ್ಲಿ ಅವರಿಗೆ ಜೈಲು ಶಿಕ್ಷೆಯಾಯಿತು. ಬಳಿಕ ಅವರು ಸೌದಿ ಅರೇಬಿಯಕ್ಕೆ ದೇಶಭ್ರಷ್ಟರಾಗಿ ತೆರಳಿದರು ಹಾಗೂ 2007ರವರೆಗೆ ಪಾಕಿಸ್ತಾನಕ್ಕೆ ಹಿಂದಿರುಗಲಿಲ್ಲ.

 2013ರಲ್ಲಿ ನಡೆದ ಚುನಾವಣೆಯಲ್ಲಿ ಅವರ ಪಾಕಿಸ್ತಾನ್ ಮುಸ್ಲಿಮ್ ಲೀಗ್-ಎನ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಪಕ್ಷೇತರರ ನೆರವನ್ನು ಪಡೆದುಕೊಂಡು ಅವರು ಮೂರನೆ ಬಾರಿಗೆ ಅಧಿಕಾರಕ್ಕೆ ಬಂದರು.

ಶರೀಫ್ ದಿನಗಳು ಮುಗಿದಿಲ್ಲ: ಪಿಎಂಎಲ್-ಎನ್

 ನವಾಝ್ ಶರೀಫ್‌ರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಪಾಕಿಸ್ತಾನದ ಪ್ರತಿಪಕ್ಷಗಳು ಸಂಭ್ರಮಿಸುತ್ತಿರುವಂತೆಯೇ, ಶರೀಫ್‌ರ ದಿನಗಳು ಇನ್ನೂ ಮುಗಿದಿಲ್ಲ ಎಂದು ಆಡಳಿತಾರೂಢ ಪಿಎಂಎಲ್-ಎನ್ ನಾಯಕರು ಹೇಳಿದ್ದಾರೆ.

‘‘ಇದು ಪಿಎಂಎಲ್-ಎನ್‌ಗೆ ಕಷ್ಟದ ಸಮಯ. ಆದರೆ ಪಕ್ಷದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ನವಾಝ್ ಶರೀಫ್ ಬಳಿಯೇ ಇದೆ’’ ಎಂದು ಪಂಜಾಬ್ ಕಾನೂನು ಸಚಿವ ರಾಣಾ ಸನಾವುಲ್ಲಾ ಸುಪ್ರೀಂ ಕೋರ್ಟ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News