'ಹಠಾತ್ ' ನಿತೀಶ್ ಘರ್ ವಾಪ್ಸಿ ಹಿಂದಿನ ವಾಸ್ತವವೇನು ?

Update: 2017-07-28 16:21 GMT

ಪಾಟ್ನಾ , ಜು. 28 : ರಾಬ್ರಿ ದೇವಿ ಎಂದರೆ ಲಾಲು ಹೇಳಿಕೊಟ್ಟಿದ್ದನ್ನು ಹೇಳುವ ಕೈಗೊಂಬೆ ಎಂದೇ ಎಲ್ಲರ ಅಂದಾಜು. ಆದರೆ ನಿತೀಶ್ ರ ಹಠಾತ್ ರಾಜಕೀಯ ತಿರುಗುಬಾಣಕ್ಕೆ ಸ್ವತಃ ರಾಬ್ರಿ ದೇವಿ ಕೂಡ ಎಷ್ಟು ಸಿಟ್ಟಾಗಿದ್ದಾರೆ ಎಂದರೆ , ಯಾವುದೇ ಹಿಂಜರಿಕೆ ಇಲ್ಲದೆ ನಿತೀಶ್ ಹಾಗು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿತೀಶ್ ರ ನಡೆಯ ಹಿಂದೆ ಏನಿತ್ತು ಎಂದು ಇಂಡಿಯಾ ಟುಡೇಯ(indiatoday.in) ರಾಜದೀಪ್ ಸರ್ದೇಸಾಯಿ ಜೊತೆ ವಿವರವಾಗಿ ಮಾತನಾಡಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ, ನಿತೀಶ್ - ಬಿಜೆಪಿ ಹೊಸ ದೋಸ್ತಿ ಕುರಿತು ಮಾತನಾಡಿದ್ದು ಇಲ್ಲಿದೆ : 

ನಿತೀಶ್ ಜೀ , ಲಾಲುಜಿಯನ್ನು ದೊಡ್ಡಣ್ಣ ಎಂದು ಹೇಳುತ್ತಿದ್ದರು. ಲಾಲುಜಿ ಸಹ ನಿತೀಶ್ ಜೀ ಯನ್ನು ತಮ್ಮ ಎಂದು ಪರಿಗಣಿಸಿದ್ದರು. ಅವರಿಗೆ ಸರ್ಕಾರ ನಡೆಸಲು ನಾವು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆವು. ಬೇಕಿದ್ದರೆ ಅವರನ್ನೇ ಇಲ್ಲಿ ಕರೆದು ನಮ್ಮೆದುರು ನಿಲ್ಲಿಸಿ ಕೇಳಿ. ನಾವು ಯಾವುದೇ ಹಸ್ತಕ್ಷೇಪ ನಡೆಸಿಲ್ಲ. ನಮ್ಮ ಸ್ಪೀಕರ್ ಇಲ್ಲ, ನಮ್ಮ ಸಿಎಂ ಇಲ್ಲ. ವರ್ಗಾವಣೆ , ಪೋಸ್ಟಿಂಗ್  ಸಹಿತ ಯಾವುದರಲ್ಲೂ ನಾವು ಮೂಗು ತೂರಿಸಿಲ್ಲ. ಆದರೆ ನಿತೀಶ್ ನಮಗೆ ದ್ರೋಹ ಮಾಡಿದರು. ಅವರು ಇಡೀ ಬಿಹಾರದ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ತನ್ನ ದೊಡ್ಡಣ್ಣನಿಗೇ ಅವರು ವಂಚಿಸಿದ್ದಾರೆ. ಇದನ್ನು ಬಿಹಾರದ ಜನರು ಕ್ಷಮಿಸುವುದಿಲ್ಲ. ಅವರಿಗೆ ಜನರು ತಕ್ಕ ಪಾಠ ಕಳಿಸುತ್ತಾರೆ. ಬಿಜೆಪಿಯೂ ಅವರನ್ನು ಒಂದು ದಿನ ಮೇಲಿಂದ ಕೆಳಗೆ ದೂಡಿ ಹಾಕುತ್ತದೆ, ನೋಡಿ. 
ನಮ್ಮ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ. ಈ ಎಲ್ಲ ಆರೋಪಗಳನ್ನು ಬಿಜೆಪಿ ಜತೆ ಸೇರಿ ರೂಪಿಸಲಾಗಿದೆ. ಒಂದು ವರ್ಷದಿಂದ ಇದಕ್ಕಾಗಿ ಷಡ್ಯಂತ್ರ ನಡೆದಿದೆ. ಹಗಲಲ್ಲಿ ನಮ್ಮ ಜೊತೆ ಇದ್ದರು, ರಾತ್ರಿ ಬಿಜೆಪಿ ಜೊತೆ ಮಾತನಾಡುತ್ತಿದ್ದರು. ನಮಗೆಲ್ಲ ಗೊತ್ತಿತ್ತು. ನಮ್ಮ ಜೊತೆ ಮೈತ್ರಿ ಮುಂದುವರಿಸಲು ಅವರಿಗೆ ಆತ್ಮ ಸಾಕ್ಷಿ ಬಿಡಲಿಲ್ಲ . ಹಾಗಾದರೆ ಅವರು ಹೇಗೆ ಸಿಎಂ ಕುರ್ಚಿಯಲ್ಲಿ ಕುಳಿತಿದ್ದಾರೆ ? ಅವರ ಮೇಲೆ ಕೊಲೆ ಕೇಸಿದೆ. ತಕ್ಷಣ ರಾಜೀನಾಮೆ ನೀಡಬೇಕು ಅವರು. ಆ ವಿಷಯದಲ್ಲಿ ಏಕೆ ಅವರಿಗೆ ಆತ್ಮಸಾಕ್ಷಿ ಚುಚ್ಚುವುದಿಲ್ಲ ? ಇದು ದೊಡ್ಡ ಮೋಸ. 

ನಾವು ನಿತೀಶ್ ಜಿ ಬಳಿ ಹೋಗಿಲ್ಲ. 2014 ರಲ್ಲಿ ಲೋಕಸಭಾ ಚುನಾವಣೆ ಸೋತ ಮೇಲೆ ಅವರೇ ಬಂದು ಲಾಲುಜಿಯ ಕಾಲಿಗೆ ಬಿದ್ದು ಗೋಳಾಡಿದರು. ಲಾಲುಜಿ ಸರಿಯಾಗಿ ಹೇಳಿದ್ದಾರೆ. ನಿತೀಶ್ ಜಿ ಅವರ ಹೊಟ್ಟೆಯಲ್ಲೂ ಹಲ್ಲಿದೆ. ನಮ್ಮ ಮೇಲೆ ಎರಡೆರಡು ಬಾರಿ ಸಿಬಿಐ ದಾಳಿ ನಡೆದಿದೆ. ಸಿಎಂ ಆಗಿದ್ದಾಗಲೂ ನಮ್ಮ ಮೇಲೆ ದಾಳಿ ನಡೆದಿದೆ. ನಿತೀಶ್ , ನರೇಂದ್ರ ಮೋದಿಜೀ ಏನು ಬೀದಿಯಲ್ಲಿ ಭಿಕ್ಷೆ ಬೇಡುತ್ತಾ ನಿಂತಿದ್ದಾರಾ ? ನಮಗೆ ಮನೆಗಳಿದ್ದರೆ ಅವರಿಗೂ ಇಲ್ಲವೇ ? 
ನಾವು ಮಕ್ಕಳ ಮೋಹ ಇದೆ ಎಂದರೆ ಅವರಿಗೆ ಮಕ್ಕಳು, ಕುಟುಂಬವೇ ಇಲ್ಲ . ನಮಗೆ ಇಡೀ ಬಿಹಾರವೇ ಕುಟುಂಬ. ಆರ್ ಜೆ ಡಿ ನಮ್ಮ ಕುಟುಂಬ. ತೇಜಸ್ವಿ ಯಾದವ್ ನ ರಾಜಕೀಯ ಭವಿಷ್ಯ ಮುಗಿಸಲು ಸಂಚು ಹೂಡಲಾಗಿದೆ. ಆದರೆ ನಮ್ಮ ವಿರುದ್ಧ ಇಂತಹ ಹಲವು ಸಂಚು ನಡೆದಿವೆ. ನಾವು ಅದನ್ನು ಎದುರಿಸಿದ್ದೇವೆ. ಇದನ್ನೂ ಎದುರಿಸುತ್ತೇವೆ. ಆಗಸ್ಟ್  27 ರಂದು ನಮ್ಮ ಬೃಹತ್ ಸಮಾವೇಶ ನಡೆಯಲಿದೆ. ಅಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇವೆ. ನಿತೀಶ್ ದೊಡ್ಡ ವಂಚಕ. ಅವರ ವಂಚನೆಯನ್ನು ಬಯಲು ಮಾಡುತ್ತೇವೆ. ನಾವು ಮೋದಿ , ನಿತೀಶ್ ಗೆ ಹೆದರುವವರಲ್ಲ. ಅವರಿಗೆ ನನ್ನನ್ನು ನೇರವಾಗಿ ನೋಡುವ ಧೈರ್ಯವಿಲ್ಲ. ಬಿಹಾರದ ಜನತೆಗಾಗಿ ನಾವು ಯಾವುದೇ ಹೋರಾಟಕ್ಕೂ ಸಿದ್ಧ.
 
ಲಾಲುಜಿಯನ್ನು ನೋಡಿ ಜನರು ನಿತೀಶ್ ಜಿ ಗೆ ಮತ ಹಾಕಿದ್ದರು. ನಿತೀಶ್ ಜಿ ಯನ್ನು ನೋಡಿ ಮತ ಹಾಕಿದ್ದಲ್ಲ. ಈಗಲೇ ರಾಜೀನಾಮೆ ಕೊಟ್ಟು ಚುನಾವಣೆಗೆ ಬರಲಿ. ನೋಡೋಣ. ನಮಗೆ ಅವರ ಅಗತ್ಯ ಇರಲಿಲ್ಲ. ಅವರಿಗೇ ನಮ್ಮ ಅಗತ್ಯ ಇತ್ತು  . ಬಂದು ಕೈಜೋಡಿಸಿದರು. 
ಮೋದಿಜೀ ಗೆ ಅಧಿಕಾರ ಸಿಕ್ಕಿದಾಗಲೆಲ್ಲಾ ಅವರು ಬಡವರು, ದಲಿತರು, ಅಲ್ಪ ಸಂಖ್ಯಾತರ ವಿರುದ್ಧ ಕೆಲಸ ಮಾಡಿದ್ದಾರೆ. ನನ್ನನ್ನು ಅನಕ್ಷರಸ್ಥೆ ಎನ್ನುವವರಿಗೆ ಕುಟುಂಬ ಯಾರು ನಡೆಸುತ್ತಾರೆ ಎಂದು ಗೊತ್ತಿರಲಿ. ಮಹಿಳೆಯೇ ಬೇಕು ಕುಟುಂಬ ನಡೆಸಲು. ಮತ್ತೆ ಹೇಳುತ್ತೇನೆ, ನಾವು ಹೋರಾಡದೆ ಬಿಡುವುದಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News