×
Ad

ಖಾದ್ಯ ವಸ್ತುಗಳಲ್ಲಿ ಬಳಸಲಾದ ಎಣ್ಣೆ, ಕೊಬ್ಬಿನಂಶದ ಮಾಹಿತಿ ಕಡ್ಡಾಯ

Update: 2017-07-29 19:09 IST

ಹೊಸದಿಲ್ಲಿ, ಜು.29: ಹೋಟೆಲ್‌ಗಳಲ್ಲಿ ನೀಡಲಾಗುವ ಖಾದ್ಯ ವಸ್ತುಗಳಿಗೆ ಬಳಸಲಾಗಿರುವ ಎಣ್ಣೆ ಅಥವಾ ಕೊಬ್ಬಿನ ಅಂಶದ ಮಾಹಿತಿಯನ್ನು ಇನ್ನು ಮುಂದೆ ಕಡ್ಡಾಯವಾಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ದೇಶದಾದ್ಯಂತ ಆಹಾರ ಸುರಕ್ಷತೆಯ ಕ್ರಮವನ್ನು ಖಾತರಿಪಡಿಸಲು ‘ಫುಡ್ ಸೇಫ್ಟಿ ಆ್ಯಂಡ್ ಸ್ಟಾಂಡರ್ಡ್ ಅಥಾರಿಟಿ ಆಫ್ ಇಂಡಿಯ’ (ಎಫ್‌ಎಸ್‌ಎಸ್‌ಎಐ) ಕೆಲವೊಂದು ಬದಲಾವಣೆ ಹಾಗೂ ನಿಬಂಧನೆಗಳನ್ನು ಪ್ರಸ್ತಾವಿಸಿದೆ. ಹೋಟೆಲ್‌ಗಳು, ರೆಸ್ಟಾರೆಂಟ್ ಮತ್ತಿತರ ಆಹಾರ ಮಳಿಗೆಗಳು ಶುದ್ಧ ದೇಶೀಯ ತುಪ್ಪವನ್ನು ಬಳಸಿರುವ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಬೇಕು.ಅಲ್ಲದೆ ವನಸ್ಪತಿ ಅಥವಾ ಎಣ್ಣೆ ಬಳಸಿದರೆ ಆ ಕುರಿತೂ ಮಾಹಿತಿ ನೀಡಬೇಕು ಎಂದು ಲೈಸೆನ್ಸ್ ಪತ್ರದಲ್ಲಿ ನಮೂದಿಸುವಂತೆ ಪ್ರಸ್ತಾವನೆ ಮಾಡಲಾಗಿದೆ.

     ಇದೊಂದು ನ್ಯಾಯಯುತ ಅಪೇಕ್ಷೆಯಾಗಿದೆ ಎಂದು ‘ನ್ಯಾಷನಲ್ ರೆಸ್ಟಾರೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯ’ (ಎನ್‌ಆರ್‌ಎಐ)ದ ಅಧ್ಯಕ್ಷ ರಿಯಾಝ್ ಅಮ್ಲಾನಿ ಹೇಳಿದ್ದಾರೆ. ತಾವು ಏನನ್ನು ತಿನ್ನುತ್ತಿದ್ದೇವೆ ಎಂದು ಗ್ರಾಹಕರು ತಿಳಿದಿರಬೇಕು. ಆದ್ದರಿಂದ ರೆಸ್ಟಾರೆಂಟ್‌ಗಳು ತಮ್ಮ ‘ಮೆನು’ ಕಾರ್ಡ್‌ನಲ್ಲಿರುವ ಖಾದ್ಯ ವಸ್ತುಗಳಲ್ಲಿರುವ ಕ್ಯಾಲರಿ ಮತ್ತು ಪೌಷ್ಠಿಕಾಂಶದ ಪ್ರಮಾಣದ ಬಗ್ಗೆ ಮಾಹಿತಿ ನೀಡಬೇಕು ಎಂದು ಎಫ್‌ಎಸ್‌ಎಸ್‌ಎಐ ಈ ಹಿಂದೆ ತಿಳಿಸಿತ್ತು. ಇದೀಗ ರೆಸ್ಟಾರೆಂಟ್ ಮತ್ತು ಹೋಟೆಲ್‌ಗಳು ಪರವಾನಿಗೆ ಪಡೆದಿರುವ ಅಥವಾ ನೋಂದಣಿ ಮಾಡಿಕೊಂಡಿರುವ ವ್ಯಾಪಾರಿಗಳಿಂದ ಮಾತ್ರ ಕಚ್ಛಾ ವಸ್ತುಗಳನ್ನು ಖರೀದಿಸಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಇದುವರೆಗೆ ತರಕಾರಿ, ಸಂಬಾರ ಪದಾರ್ಥಗಳು ಮತ್ತಿತರ ಕಚ್ಛಾ ವಸ್ತುಗಳ ಪೂರೈಕೆದಾರರು ಎಫ್‌ಎಸ್‌ಎಸ್‌ಎಐನಿಂದ ಅನುಮತಿ ಪಡೆಯುವ ಅಗತ್ಯವಿರಲಿಲ್ಲ. .

    ಅಲ್ಲದೆ, ಎಫ್‌ಎಸ್‌ಎಸ್‌ಐಎಯಿಂದ ತರಬೇತಿ ಪಡೆದಿರುವ ಕನಿಷ್ಟ ಒಬ್ಬ ತಂತ್ರಜ್ಞನನ್ನು ಆಹಾರ ಸುರಕ್ಷೆ ಮೇಲ್ವಿಚಾರಕರನ್ನಾಗಿ ರೆಸ್ಟಾರೆಂಟ್‌ಗಳು ಹೊಂದಿರಬೇಕು ಎಂದೂ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಅಲ್ಲದೆ ಹೋಟೆಲ್‌ನಲ್ಲಿ ಇರುವ ನೈರ್ಮಲ್ಯ, ಆಹಾರ ಸುರಕ್ಷತೆಯ ಬಗ್ಗೆ ಗ್ರಾಹಕರಿಗೆ ಕಾಣುವಂತೆ ಪ್ರದರ್ಶನ ಪರದೆಯಲ್ಲಿ ಪ್ರದರ್ಶಿಸಬೇಕು ಎಂದು ಪ್ರಸ್ತಾವನೆ ತಿಳಿಸಿದೆ.

  ಇದರಿಂದ ಹೋಟೆಲ್‌ಗಳ ನಿರ್ವಹಣಾ ವೆಚ್ಚ ಅಧಿಕವಾಗಬಹುದು. ಆದರೆ ಗ್ರಾಹಕರ ಆರೋಗ್ಯ ಮತ್ತು ಹಿತಚಿಂತನೆಯ ನಿಟ್ಟಿನಲ್ಲಿ ಇದೊಂದು ಸಣ್ಣ ಬೆಲೆಯಾಗಿದೆ ಎಂದು ಎನ್‌ಆರ್‌ಎಐ ದ ಅಧ್ಯಕ್ಷ ರಿಯಾಝ್ ಅಮ್ಲಾನಿ ತಿಳಿಸಿದ್ದಾರೆ. ಆಹಾರ ಸುರಕ್ಷತೆಯ ನಿಟ್ಟಿನಲ್ಲಿ ಎಫ್‌ಎಸ್‌ಎಸ್‌ಐಎ ಪ್ರಶಂಸನೀಯ ಕಾರ್ಯ ಮಾಡುತ್ತಿದೆ. ಕೆಲವು ವಿಷಯಗಳಲ್ಲಿ ಸಮಸ್ಯೆ ಇರಬಹುದು. ಆದರೆ ಈ ಬಗ್ಗೆ ಹೋಟೆಲ್ ಉದ್ಯಮಿಗಳ ಅಹವಾಲು ಆಲಿಸಲು ಎಫ್‌ಎಸ್‌ಎಸ್‌ಐಎ ಮುಕ್ತ ಮನಸ್ಸು ಹೊಂದಿದೆ. ಮೇಲ್ವಿಚಾರಕರ ತರಬೇತಿ ನಿಟ್ಟಿನಲ್ಲಿ ಎನ್‌ಆರ್‌ಎಐ ಕಾರ್ಯಪ್ರವೃತ್ತವಾಗಿದೆ ಎಂದವರು ಹೇಳಿದ್ದಾರೆ.

ಭಾರತದ ಖಾದ್ಯ ಸೇವಾ ಮಾರುಕಟ್ಟೆ 2021ರ ವೇಳೆಗೆ 4.98 ಲಕ್ಷ ಕೋಟಿ ರೂ.ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. 2016ರಲ್ಲಿ ಇದು 3.09 ಲಕ್ಷ ಕೋಟಿ ರೂ. ಆಗಿತ್ತು ಎಂದು ಎನ್‌ಆರ್‌ಎಐ ಹಾಗೂ ‘ಟೆಕ್ನೊಪಾರ್ಕ್ ’ ಸಂಸ್ಥೆ ನಡೆಸಿದ ಜಂಟಿ ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News