×
Ad

2 ಸಾವಿರ ರೂ. ನೋಟು ರದ್ದತಿಯಿಲ್ಲ: ಕೇಂದ್ರ ಸ್ಪಷ್ಟನೆ

Update: 2017-07-29 20:30 IST

ಹೊಸದಿಲ್ಲಿ, ಜು.29: 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಲಿದೆಯೆಂಬ ವದಂತಿಗಳನ್ನು ಕೇಂದ್ರ ಸಹಾಯಕ ವಿತ್ತ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ತಳ್ಳಿಹಾಕಿದ್ದಾರೆ. ಆದರೆ 200 ರೂ. ಮುಖಬೆಲೆಯ ನೋಟುಗಳು ಶೀಘ್ರದಲ್ಲೇ ಚಲಾವಣೆಗೆ ಬರಲಿವೆಯೆಂದು ಅವರು ತಿಳಿಸಿದ್ದಾರೆ.

ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, 2 ಸಾವಿರ ರೂ. ನೋಟು ರದ್ದುಗೊಳಿಸುವ ಬಗ್ಗೆ ಯಾವುದೇ ಸುದ್ದಿ ತನಗೆ ಬಂದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

2 ಸಾವಿರ ರೂ. ನೋಟುಗಳ ಮುದ್ರಣವನ್ನು ಕಡಿಮೆಗೊಳಿಸುವುದು ಪ್ರತ್ಯೇಕವಾದ ವಿಷಯವಾಗಿದೆ. ಆ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಲಿದೆಯೆಂದರು.

 ಕೇಂದ್ರ ಸರಕಾರವು ಈಗಾಗಲೇ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಿರುವುದಾಗಿ ಇತ್ತೀಚೆಗೆ ಕೆಲವು ಮಾಧ್ಯಮಳು ವರದಿ ಮಾಡಿದ್ದವು.

 200 ರೂ. ಮುಖಬೆಲೆಯ ನೋಟಿನ ಮುದ್ರಣವು ಈಗಾಗಲೇ ಆರಂಭಗೊಂಡಿದ್ದು, ಶೀಘ್ರದಲ್ಲೇ ಚಲಾವಣೆಗೆ ಬರಲಿದೆ. ಸಣ್ಣ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹೆಚ್ಚಿಸುವ ಉದ್ದೇಶದಿಂದ 200 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂದರು.

ಎಂಪಿಎಂನಲ್ಲಿ ತಯಾರಾದ ಕಾಗದ 200 ರೂ. ನೋಟಿಗೆ ಬಳಕೆ

 ಆಗಸ್ಟ್‌ನಲ್ಲಿ 200 ರೂ. ಮುಖಬೆಲೆಯ ನೋಟನ್ನು ಮಾರುಕಟ್ಟೆಗಳಿಗೆ ಪರಿಚಯಿಸ ಲಾಗುವುದು ಎಂದು ಉನ್ನತ ಸರಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ನೋಟುಗಳಿಗೆ ಬಳಕೆಯಾಗುವ ಕಾಗದ ಮೈಸೂರ್‌ಪೇಪರ್ ಮಿಲ್ಸ್ (ಎಂಪಿಎಂ)ನಲ್ಲಿ ಸಿದ್ಧಗೊಂಡಿದೆ. ಮೈಸೂರು, ಪಶ್ಚಿಮಬಂಗಾಳದ ಸಲ್ಬೋನಿ, ಮಹಾರಾಷ್ಟ್ರದ ನಾಸಿಕ್ ಮತ್ತು ಮಧ್ಯಪ್ರದೇಶದ ದೇವಾಸ್‌ನಲ್ಲಿರುವ ಆರ್‌ಬಿಐ ಮುದ್ರಣಾಲಯದಲ್ಲಿ ಈ ನೋಟುಗಳು ಮುದ್ರಣಗೊಳ್ಳುತ್ತಿವೆ.
 ನೋಟು ಅಮಾನ್ಯತೆಯ ಬಳಿಕ ಚಲಾವಣೆಗೆ ಬಂದ 2 ಸಾವಿರ ರೂ. ಮುಖಬೆಲೆಯ ನೋಟುಗಳಿಂದಾಗಿ ಜನತೆ ಚಿಲ್ಲರೆಯ ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ವರದಿಯಾಗಿದ್ದವು. 500 ಹಾಗೂ 100 ರೂ. ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಚಲಾವಣೆಯಲ್ಲಿಲ್ಲದಿದ್ದುದೇ ಇದಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News