×
Ad

ವಾಯಪಡೆಯ ಅಧಿಕಾರಿಗಳಿಂದ ವಿದೇಶ ಪ್ರವಾಸ ಭತ್ತೆ ದುರುಪಯೋಗ: ಸಿಎಜಿ

Update: 2017-07-29 21:19 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜು.29: ಭಾರತೀಯ ವಾಯುಪಡೆಯ ಅಧಿಕಾರಿಗಳು ಪ್ರವಾಸ ನಿಯಮವನ್ನು ಮೀರಿ, ವಿದೇಶಗಳಿಗೆ ಭೇಟಿ ನೀಡಿದ ಬಳಿಕ ಭತ್ತೆ ಪಡೆಯುವ ಮೂಲಕ ಖಜಾನೆಗೆ 82 ಲಕ್ಷಕ್ಕೂ ಹೆಚ್ಚು ನಷ್ಟ ಉಂಟು ಮಾಡಿದ್ದಾರೆ ಎಂದು ನಿಯಂತ್ರಕ ಮತ್ತು ಮಹಾಲೆಕ್ಕಪಾಲಕ(ಸಿಎಜಿ) ವರದಿಯಲ್ಲಿ ತಿಳಿಸಲಾಗಿದೆ.

 ನಿಯಮದ ಪ್ರಕಾರ, ಸೇನಾಧಿಕಾರಿಗಳು ರಜೆ ಮೇಲಿದ್ದಾಗ, ದೇಶದೊಳಗೆ ನಡೆಸಿದ ಪ್ರವಾಸಕ್ಕೆ ಮಾತ್ರ ರಜೆ ಪ್ರವಾಸ ರಿಯಾಯಿತಿ(ಎಲ್‌ಟಿಸಿ) ಪಡೆಯಬಹುದು. ಆದರೆ ಐಎಎಫ್ ಅಧಿಕಾರಿಗಳು ವಿದೇಶ ಪ್ರವಾಸ್ಕಕೂ ಎಲ್‌ಟಿಸಿ ಸೌಲಭ್ಯ ಪಡೆದಿರುವುದು 2010ರಿಂದ 2015ರವರೆಗಿನ ದಾಖಲೆಗಳಿಂದ ತಿಳಿದು ಬಂದಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯನ್ನು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾಗಿದೆ.

 ಎಲ್‌ಟಿಸಿ ನಿಯಮ ಉಲ್ಲಂಘಿಸಿ ನಡೆಸಿರುವ ಪ್ರವಾಸದ ವೆಚ್ಚ 82.58 ಲಕ್ಷ ರೂ. ಎಂದು ತೋರಿಸಲಾಗಿದೆ. ವೈಯಕ್ತಿಕ ವೆಚ್ಚದಲ್ಲಿ ವಿದೇಶ ಪ್ರವಾಸ ಕೈಗೊಳ್ಳುವುದಾಗಿ ಸಂಬಂಧಿತ ಮೇಲಧಿಕಾರಿಗಳಿಂದ ಅನುಮತಿ ಪಡೆದಿದ್ದ ಐಎಎಫ್ ಅಧಿಕಾರಿಗಳು , ಬಳಿಕ ಎಲ್‌ಟಿಸಿ ಸೌಲಭ್ಯದಡಿ ಪ್ರವಾಸ ಭತ್ತೆ ಪಡೆದಿದ್ದಾರೆ. ಇವರ ಕೋರಿಕೆ ಪ್ರವಾಸ ನಿಯಮ ಉಲ್ಲಂಘಿಸಿದ್ದರೂ ಈ ಬಿಲ್‌ಗಳನ್ನು ತೀರುವಳಿ (ಕ್ಲಿಯರ್) ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

 ಲೆಕ್ಕಪತ್ರ ತಪಾಸಣೆ ಸಂದರ್ಭ ಸಿಎಜಿ ಎತ್ತಿರುವ ಆಕ್ಷೇಪದ ಬಗ್ಗೆ 2017ರ ಜನವರಿಯಲ್ಲಿ ಪ್ರತಿಕ್ರಿಯೆ ನೀಡಿದ್ದ ಸರಕಾರ, ಪ್ರವಾಸ ನಿಯಮದಲ್ಲಿ ಇರುವ ಅಸ್ಪಷ್ಟತೆ ಯಿಂದ ಹೀಗಾಗಿದೆ. ಸಂಬಂಧಿತ ಅಧಿಕಾರಿಗಳಿಂದ ಹಣವನ್ನು ಪೂರ್ಣವಾಗಿ ವಸೂಲಿ ಮಾಡಲಾಗುವುದು ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News