ಪಾಕ್ ಬೆಳವಣಿಗೆಯಿಂದ ಸಿಪಿಇಸಿಗೆ ಬಾಧಕವಿಲ್ಲ: ಚೀನಾ
Update: 2017-07-29 21:35 IST
ಬೀಜಿಂಗ್, ಜು. 29: ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಹುದ್ದೆಯಿಂದ ಅನರ್ಹಗೊಂಡಿರುವುದು ಆ ದೇಶದ ಆಂತರಿಕ ವಿಚಾರವಾಗಿದೆ ಹಾಗೂ ಅದು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಚೀನಾದ ವಿದೇಶ ಸಚಿವಾಲಯ ಹೇಳಿದೆ.
ಪನಾಮ ದಾಖಲೆ ಬಹಿರಂಗ ಪ್ರಕರಣದಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಲು ಕಾಂಗ್ ಶುಕ್ರವಾರ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು.
‘‘ಚೀನಾ-ಪಾಕಿಸ್ತಾನ ಆಯಕಟ್ಟು ಸಹಕಾರಿ ಭಾಗೀದಾರಿಕೆಯು ಪಾಕಿಸ್ತಾನದ ಒಳಗಿನ ಬೆಳವಣಿಗೆಗಳಿಂದ ಪ್ರಭಾವಿತವಾಗುವುದಿಲ್ಲ. ‘ವನ್ ಬೆಲ್ಟ್ ವನ್ ರೋಡ್’ನ ಜಂಟಿ ನಿರ್ಮಾಣದಲ್ಲಿ ಪಾಕಿಸ್ತಾನದ ಜೊತೆ ಕೆಲಸ ಮಾಡಲು ಚೀನಾ ಸಿದ್ಧವಾಗಿದೆ’’ ಎಂದು ಲು ಹೇಳಿರುವುದಾಗಿ ‘ನ್ಯೂಸ್ ಇಂಟರ್‌ನ್ಯಾಶನಲ್’ ಪತ್ರಿಕೆ ವರದಿ ಮಾಡಿದೆ.