×
Ad

ಪಾಕ್: ಅಬ್ಬಾಸಿ ಮಧ್ಯಂತರ ಪ್ರಧಾನಿ

Update: 2017-07-29 21:52 IST

ಇಸ್ಲಾಮಾಬಾದ್, ಜು.29: ‘ಪನಾಮಾ ಪೇಪರ್ಸ್’ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿ ಪಾಕ್ ಪ್ರಧಾನಿ ನವಾಝ್ ಶರೀಫ್ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ಆಡಳಿತಾರೂಢ ಪಿಎಂಎಲ್-ಎನ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಪೆಟ್ರೋಲಿಯಂ ಸಚಿವ ಶಹೀದ್ ಖಾಖನ್ ಅಬ್ಬಾಸಿ ಮಧ್ಯಂತರ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ನವಾಝ್ ಶರೀಫ್ ಅವರ ಸಹೋದರ ಶಹಬಾಝ್ ಶರೀಫ್ ಪಾಕ್ ಸಂಸತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಪ್ರಧಾನಿ ಹುದ್ದೆಯನ್ನೇರಲಿದ್ದು, ಅಲ್ಲಿಯವರೆಗೆ ಅಬ್ಬಾಸಿ ಮಧ್ಯಂತರ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

 ಇಸ್ಲಾಮಾಬಾದ್‌ನಲ್ಲಿ ಶನಿವಾರ ನಡೆದ ಪಿಎಂಎಲ್-ಎನ್ ಪಕ್ಷದ ಅನೌಪಚಾರಿಕ ಸಭೆಯಲ್ಲಿ ಶಹಬಾಝ್ ಶರೀಫ್ ಅವರನ್ನು ಪ್ರಧಾನಿಯಾಗಿ ನೇಮಿಸಲು ನಿರ್ಧರಿಸಲಾಯಿತೆಂದು ಜಿಯೋ ಟಿವಿ ವರದಿ ಮಾಡಿದೆ.

ಶಹಬಾಝ್ ಪ್ರಧಾನಿಯಾಗಬೇಕಾದರೆ ಮೊದಲು ಅವರು ಸಂಸತ್ ಸದಸ್ಯರಾಗಬೇಕಿದ್ದು, ಅಲ್ಲಿಯವರೆಗೆ ಮಾಜಿ ಪೆಟ್ರೋಲಿಯಂ ಸಚಿವ ಅಬ್ಬಾಸಿ ಅವರನ್ನು ಮಧ್ಯಂತರ ಪ್ರಧಾನಿಯಾಗಿ ನೇಮಿಸಲು ಸಭೆಯಲ್ಲಿ ನಿರ್ಧರಿಸಲಾಯಿತೆಂದು ವರದಿ ತಿಳಿಸಿದೆ

 ಲಂಡನ್‌ನಲ್ಲಿ ಬೇನಾಮಿ ಅಸ್ತಿಗಳನ್ನು ಖರೀದಿಸಲು ಭಾರೀ ಮೊತ್ತದ ಕಪ್ಪುಹಣವನ್ನು ಬಿಳುಪುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಾಕ್ ಸುಪ್ರೀಂಕೋರ್ಟ್ ನವಾಝ್ ಶರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿತ್ತು.

  ನಿನ್ನೆ ನಡೆದ ಪಕ್ಷದ ನಾಯಕರ ಸಭೆಯಲ್ಲಿ ತನ್ನ ಉತ್ತರಾಧಿಕಾರಿಯಾಗಿ ತನ್ನ ಸಹೋದರ ಶಹಬಾಝ್ ಶರೀಫ್ ಅವರ ಹೆಸರನ್ನು ನವಾಝ್ ಪ್ರಸ್ತಾಪಿಸಿದ್ದರು ಹಾಗೂ ಪಕ್ಷದ ಯಾವುದೇ ನಾಯಕ ಕೂಡಾ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲವೆಂದು ಪಿಎಂಎಲ್-ಎನ್ ಮೂಲಗಳು ತಿಳಿಸಿವೆ.

 65 ವರ್ಷದ ಶಹಬಾಝ್ ಶರೀಫ್ ಪ್ರಸ್ತುತ ಪಂಜಾಬ್ ಪ್ರಾಂತದ ಮುಖ್ಯಮಂತ್ರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News