ಅಪಾಯದಂಚಿನಲ್ಲಿದೆ ಭಾರತದ ಈ 29 ನಗರಗಳು

Update: 2017-07-30 14:50 GMT

ಹೊಸದಿಲ್ಲಿ, ಜು.30: ದಿಲ್ಲಿ ಸೇರಿದಂತೆ ಭಾರತದ 29 ನಗರಗಳು/ಪಟ್ಟಣಗಳು ‘ತೀವ್ರದಿಂದ ಅತಿ ತೀವ್ರ ’ ಭೂಕಂಪದ ವಲಯದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವರದಿಯಲ್ಲಿ ತಿಳಿಸಲಾಗಿದೆ.

ಇವುಗಳಲ್ಲಿ ಬಹುತೇಕ ನಗರಗಳು ವಿಶ್ವದ ಅತ್ಯಂತ ಸಕ್ರಿಯ ಭೂಕಂಪನ ಪ್ರದೇಶ ಎಂದೆನಿಸಿರುವ ಹಿಮಾಲಯ ಪ್ರದೇಶದಲ್ಲಿವೆ ಎಂದು ವರದಿ ತಿಳಿಸಿದೆ.

ದಿಲ್ಲಿ, ಪಟ್ನ(ಬಿಹಾರ), ಶ್ರೀನಗರ(ಜಮ್ಮು-ಕಾಶ್ಮೀರ), ಕೊಹಿಮ(ನಾಗಾಲ್ಯಾಂಡ್), ಪುದುಚೇರಿ, ಗುವಾಹಟಿ(ಅಸ್ಸಾಂ), ಗ್ಯಾಂಗ್ಟಕ್(ಸಿಕ್ಕಿಂ), ಶಿಮ್ಲ(ಹಿಮಾಚಲ ಪ್ರದೇಶ), ಡೆಹ್ರಾಡೂನ್(ಉತ್ತರಾಖಂಡ), ಇಂಫಾಲ್(ಮಣಿಪುರ) ಮತ್ತು ಚಂಡೀಗಢ ನಗರಗಳು ಭೂಕಂಪನ ವಲಯ 4 ಮತ್ತು 5ರಲ್ಲಿ ಬರುತ್ತವೆ. ಈ ಎಲ್ಲಾ ನಗರಗಳ ಒಟ್ಟು ಜನಸಂಖ್ಯೆ 3 ಕೋಟಿಗೂ ಹೆಚ್ಚಾಗಿದೆ.

     ಭೂಕಂಪದ ದಾಖಲೆ, ಭೂಪದರದ ರಚನೆ ಮತ್ತು ಚಲನೆ ಹಾಗೂ ಸಂಭವಿಸಿದ ಹಾನಿ - ಇದರ ಆಧಾರದಲ್ಲಿ ದೇಶದ ವಿವಿಧ ಪ್ರದೇಶಗಳನ್ನು 2ರಿಂದ 5ರವರೆಗಿನ ವಲಯಗಳಲ್ಲಿ ಬ್ಯೂರೊ ಆಫ್ ಇಂಡಿಯನ್ ಸ್ಟಾಂಡರ್ಡ್ಸ್(ಬಿಐಎಸ್) ವರ್ಗೀಕರಿಸಿದೆ ಎಂದು ಎನ್‌ಸಿಎಸ್ ನಿರ್ದೇಶಕ ವಿನೀತ್ ಗುಹ್ಲತ್ ತಿಳಿಸಿದ್ದಾರೆ.

ಅಪಾಯಕರ ಭೂಕಂಪ ಪರಿಣಾಮಕ್ಕೆ ಒಳಗಾಗುವ ಸಂಭವ ಇರುವ ಪ್ರದೇಶವನ್ನು ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಿ ನಡೆಸುವ ಅಧ್ಯಯನವನ್ನು ಎನ್‌ಸಿಎಸ್ ದಾಖಲೀಕರಿಸಿಕೊಳ್ಳುತ್ತದೆ. ವಲಯ 2ರಲ್ಲಿ ಕನಿಷ್ಠ ಭೂಕಂಪನ ಸಂಭವಿಸುವ ಪ್ರದೇಶಗಳು ಬರುತ್ತವೆ. ವಲಯ ಐದು ಅತ್ಯಂತ ಕ್ರಿಯಾಶೀಲ ಭೂಕಂಪದ ಪ್ರದೇಶವಾಗಿದ್ದರೆ 4 ಮತ್ತು 5 ತೀವ್ರದಿಂದ ಅತೀ ತೀವ್ರ ಭೂಕಂಪನ ಪ್ರದೇಶದಲ್ಲಿ ಬರುತ್ತದೆ. ಸಂಪೂರ್ಣ ಈಶಾನ್ಯ ಪ್ರದೇಶ , ಜಮ್ಮು ಕಾಶ್ಮೀರದ ಕೆಲ ಭಾಗಗಳು, ಹಿಮಾಚಲ ಪ್ರದೇಶ, ಉತ್ತರಾಖಂಡ, ಗುಜರಾತ್‌ನ ಕಚ್, ಉತ್ತರ ಬಿಹಾರದ ಕೆಲ ಪ್ರದೇಶಗಳು ಹಾಗೂ ಅಂಡಮಾನ್ ಮತ್ತು ನಿಕೋಬರ್ ಪ್ರದೇಶಗಳನ್ನು ವಲಯ 5 ಒಳಗೊಂಡಿವೆ. ಜಮ್ಮು ಕಾಶ್ಮೀರದ ಕೆಲ ಭಾಗಗಳು, ದಿಲ್ಲಿ, ಸಿಕ್ಕಿಂ, ಉತ್ತರಪ್ರದೇಶದ ಉತ್ತರ ಭಾಗ, ಪಶ್ಚಿಮ ಬಂಗಾಲ, ಗುಜರಾತ್ ಮತ್ತು ಮಹಾರಾಷ್ಟ್ರದ ಸ್ವಲ್ಪ ಪ್ರದೇಶಗಳು ವಲಯ ನಾಲ್ಕರಲ್ಲಿ ಬರುತ್ತವೆ. ಭುಜ್, ಚಂಡೀಗಡ, ಅಂಬಾಲ, ಅಮೃತ್‌ಸರ, ಲುಧಿಯಾನ ಮತ್ತು ರೂರ್ಕಿ ನಗರಗಳು ವಲಯ 4 ಮತ್ತು 5ರಲ್ಲಿ ಬರುತ್ತದೆ.

      ಈ ಪಟ್ಟಿಯಲ್ಲಿರುವ ಹೆಚ್ಚಿನ ನಗರಗಳು ಜನಸಾಂದ್ರತೆಯನ್ನು ಹೊಂದಿದ್ದು ಹಿಮಾಲಯದ ತಪ್ಪಲಲ್ಲಿದೆ. ಮೇಲಣ ಅಸ್ಸಾಂ ಪ್ರದೇಶದಿಂದ ಜಮ್ಮು ಮತ್ತು ಕಾಶ್ಮೀರದವರೆಗೆ ಹರಡಿಕೊಂಡಿರುವ ಪ್ರದೇಶವು ಅಧಿಕ ಭೂಕಂಪದ ಪ್ರದೇಶವಾಗಿದೆ ಎಂದು ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ಪ್ರೊಫೆಸರ್ ಆಗಿರುವ ಕುಶಲ ರಾಜೇಂದ್ರನ್ ಹೇಳುತ್ತಾರೆ.

  ಮುಂದಿನ ವರ್ಷದ ಮಾರ್ಚ್‌ನಲ್ಲಿ 31 ಹೊಸ ಭೂಕಂಪನ ಸಮೀಕ್ಷೆ ನಡೆಯಲಿದೆ ಎಂದು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ಎಂ.ರಾಜೀವನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News