‘ಆಕ್ರಮಣಕಾರಿ ಶತ್ರು’ಗಳನ್ನು ಸೋಲಿಸುವ ಸಾಮರ್ಥ್ಯ ಸೇನೆಗೆ ಇದೆ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
ಬೀಜಿಂಗ್, ಜು. 30: ‘ಆಕ್ರಮಣಕಾರಿ’ ಶತ್ರುಗಳನ್ನು ಸೋಲಿಸಿ ದೇಶದ ಸಾರ್ವಭೌಮತೆಯನ್ನು ಕಾಪಾಡುವ ಸಾಮರ್ಥ್ಯ ಚೀನಾದ ಸೇನೆ ‘ಪೀಪಲ್ಸ್ ಲಿಬರೇಶನ್ ಆರ್ಮಿ’ (ಪಿಎಲ್‌ಎ)ಗೆ ಇದೆ ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ.
ಪಿಎಲ್‌ಎ ಸ್ಥಾಪನೆಯ 90ನೆ ವಾರ್ಷಿಕ ದಿನದ ಸಂದರ್ಭದಲ್ಲಿ ರವಿವಾರ ಇನ್ನರ್ ಮಂಗೋಲಿಯದ ಝುರೈಹ್ ಯುದ್ಧ ತರಬೇತಿ ನೆಲೆಯಲ್ಲಿ ನಡೆದ ಸೇನಾ ಪಥಸಂಚಲನವನ್ನು ವೀಕ್ಷಿಸಿದ ಬಳಿಕ ಅವರು ಮಾತನಾಡುತ್ತಿದ್ದರು.
‘‘ಎಲ್ಲ ಆಕ್ರಮಣಕಾರಿ ಶತ್ರುಗಳನ್ನು ಸೋಲಿಸಿ ಚೀನಾದ ರಾಷ್ಟ್ರೀಯ ಸಮಗ್ರತೆ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ರಕ್ಷಿಸುವ ವಿಶ್ವಾಸ ಮತ್ತು ಸಾಮರ್ಥ್ಯ ಪಿಎಲ್‌ಎಗೆ ಇದೆ’’ ಎಂದು ಸಂಪೂರ್ಣ ಸೇನಾ ದಿರಿಸಿನಲ್ಲಿ ಕಂಗೊಳಿಸಿದ ಜಿನ್‌ಪಿಂಗ್ ನುಡಿದರು.
‘‘ಬಲಿಷ್ಠ ಸೇನೆಯನ್ನು ನಿರ್ಮಿಸಿ ಚೀನಾದ ಎರಡು ಶತಮಾನಗಳ ಗುರಿಗಳು ಮತ್ತು ರಾಷ್ಟ್ರೀಯ ಪುನರುಜ್ಜೀವನದ ಕನಸನ್ನು ನನಸು ಮಾಡುವ ಹಾಗೂ ಆ ಮೂಲಕ ಜಾಗತಿಕ ಶಾಂತಿಯನ್ನು ಸಂರಕ್ಷಿಸುವ ವಿಶ್ವಾಸ ಮತ್ತು ಸಾಮರ್ಥ್ಯವೂ ಪಿಎಲ್‌ಎಗಿದೆ’’ ಎಂದು ಕ್ಸಿ ಹೇಳಿರುವುದಾಗಿ ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ.
ಭಾರತ ಮತ್ತು ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಉಭಯ ದೇಶಗಳ ಸೇನೆಗಳ ನಡುವೆ ಸಂಘರ್ಷ ಪರಿಸ್ಥಿತಿ ನೆಲೆಸಿರುವ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಆದಾಗ್ಯೂ, ಅಧಿಕೃತ ಮಾಧ್ಯಮ ಬಿಡುಗಡೆ ಮಾಡಿರುವ ಕ್ಸಿ ಭಾಷನದ ತುಣುಕುಗಳಲ್ಲಿ ಭಾರತದ ನೇರ ಪ್ರಸ್ತಾಪವಿಲ್ಲ ಹಾಗೂ ಡೋಕಾ ಲದಲ್ಲಿ ಈಗ ನೆಲೆಸಿರುವ ಉದ್ವಿಗ್ನತೆಯ ಯಾವುದೇ ಪ್ರಸ್ತಾಪವಿಲ್ಲ. ಆದರೆ, ‘ಆಕ್ರಮಣಕಾರಿ ಶತ್ರುಗಳು’ ಎಂಬುದಾಗಿ ಜಿನ್‌ಪಿಂಗ್ ಹೇಳಿರುವುದು ಭಾರತದ ಸ್ಪಷ್ಟ ಉಲ್ಲೇಖವಾಗಿದೆ ಎಂದು ಭಾವಿಸಲಾಗಿದೆ.