ಉತ್ತರ ಕೊರಿಯ ವಿಷಯದಲ್ಲಿ ಚೀನಾ ಮೌನ: ಟ್ರಂಪ್ ಕೆಂಡ
Update: 2017-07-30 20:39 IST
ವಾಶಿಂಗ್ಟನ್, ಜು. 30: ಉತ್ತರ ಕೊರಿಯಕ್ಕೆ ಸಂಬಂಧಿಸಿ ಏನೂ ಮಾಡದೆ ಸುಮ್ಮನಿರುವುದಕ್ಕೆ ಇನ್ನು ತಾನು ಚೀನಾಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.
ಉತ್ತರ ಕೊರಿಯ ಶುಕ್ರವಾರ ಮಧ್ಯರಾತ್ರಿ ಅಮೆರಿಕವನ್ನು ತಲುಪಬಲ್ಲ ಸುದೀರ್ಘ ವ್ಯಾಪ್ತಿಯ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ ಬಳಿಕ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.
‘‘ಚೀನಾದ ಬಗ್ಗೆ ನನಗೆ ನಿರಾಶೆಯಾಗಿದೆ. ಚೀನಾ ವ್ಯಾಪಾರದಲ್ಲಿ ವರ್ಷಕ್ಕೆ ಸಾವಿರಾರು ಕೋಟಿ ಡಾಲರ್ ಸಂಪಾದಿಸಲು ನಮ್ಮ ಹಿಂದಿನ ಮೂರ್ಖ ನಾಯಕರು ಅವಕಾಶ ಮಾಡಿಕೊಟ್ಟಿದ್ದಾರೆ. ಆದಾಗ್ಯೂ, ಅವರು ಉತ್ತರ ಕೊರಿಯದ ವಿಷಯದಲ್ಲಿ ನಮಗಾಗಿ ಏನೂ ಮಾಡುತ್ತಿಲ್ಲ, ಕೇವಲ ಮಾತನಾಡುತ್ತಿದ್ದಾರೆ’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.