ಫಿಲಿಪ್ಪೀನ್ಸ್: ಮಾದಕ ದ್ರವ್ಯ ನಿಗ್ರಹ ದಾಳಿಯಲ್ಲಿ ಮೇಯರ್ ಸಾವು

Update: 2017-07-30 15:26 GMT

ಝಂಬೋಂಗ (ಫಿಲಿಪ್ಪೀನ್ಸ್), ಜು. 30: ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ನಡೆದ ಮಾದಕದ್ರವ್ಯ ನಿಗ್ರಹ ದಾಳಿಯಲ್ಲಿ ಓರ್ವ ಮೇಯರ್ ಹಾಗೂ ಇತರ ಆರು ಮಂದಿ ಹತರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

 ಒಝಾಮಿಕ್ ನಗರದ ಮೇಯರ್ ರಿನಾಲ್ಡೊ ಪರೊಜಿನೊಗ್ ಸೀನಿಯರ್, ಉಪ ಮೇಯರ್ ಆಗಿರುವ ಅವರ ಮಗಳು ನೊವಾ ಎಕೇವ್ಸ್ ಮತ್ತು ನಗರಪಾಲಿಕೆಯ ನಾಲ್ವರು ಅಧಿಕಾರಿಗಳಿಗೆ ವಾರಂಟ್ ನೀಡಲು ರವಿವಾರ ಮುಂಜಾನೆ ಹೋಗಿದ್ದಾಗ, ಅವರು ಪೊಲೀಸರ ಮೇಲೆ ದಾಳಿ ನಡೆಸಿದರು ಎನ್ನಲಾಗಿದೆ.

ಬಳಿಕ ನಡೆದ ಗುಂಡಿನ ಕಾಳಗದಲ್ಲಿ ಪರೊಜಿನೊಗ್ ಮತ್ತು ಮನೆಯಲ್ಲಿದ್ದ ಅವರ ಆರು ಸಂಬಂಧಿಗಳು ಹಾಗೂ ಅಂಗರಕ್ಷಕರು ಮೃತಪಟ್ಟರು.
ಪರೊಜಿನೊಗ್‌ರ ಮಗಳು ನೊವಾರನ್ನು ಬಂಧಿಸಲಾಗಿದೆ.

ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಸಿದ್ಧಪಡಿಸಿರುವ ಅಕ್ರಮ ಮಾದಕ ದ್ರವ್ಯ ವ್ಯವಹಾರದಲ್ಲಿ ನಿರತರಾಗಿರುವ ರಾಜಕಾರಣಿಗಳ ಪಟ್ಟಿಯಲ್ಲಿ ಪರೊಜಿನೊಗ್‌ರ ಹೆಸರಿತ್ತು.

ಡುಟರ್ಟ್ ಫಿಲಿಪ್ಪೀನ್ಸ್ ಅಧ್ಯಕ್ಷರಾದ ಬಳಿಕ ಮಾದಕ ದ್ರವ್ಯದ ವಿರುದ್ಧ ಸಮರ ಸಾರಿದ್ದು, ಸಾವಿರಾರು ಶಂಕಿತರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News