2015-16ರಲ್ಲಿ 562 ಕೋ.ರೂ.ಕಾಳಧನ ಪತ್ತೆ

Update: 2017-07-30 17:47 GMT

ಹೊಸದಿಲ್ಲಿ, ಜು.30: ಕಳೆದ (2015-16ರ) ಆರ್ಥಿಕ ವರ್ಷದಲ್ಲಿ ಶಂಕಾಸ್ಪದ ವ್ಯವಹಾರಗಳ ಪತ್ತೆಹಚ್ಚುವಿಕೆ , ನಕಲಿ ನೋಟುಗಳ ಚಲಾವಣೆ ಮತ್ತು ದೇಶದ ಅರ್ಥವ್ಯವಸ್ಥೆಗೆ ಗಡಿಯಾಚೆಗಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ದ್ವಿಗುಣಗೊಂಡಿದ್ದು , 562 .36 ಕೋ.ರೂ. ಕಾಳಧನ ಪತ್ತೆಹಚ್ಚಲಾಗಿದೆ ಎಂದು ಸರಕಾರದ ವರದಿಯೊಂದು ತಿಳಿಸಿದೆ.

  2015-16ರಲ್ಲಿ ಇಂತಹ ಅಕ್ರಮಗಳನ್ನು ದಾಖಲೆ ಪ್ರಮಾಣದಲ್ಲಿ ಪತ್ತೆಹಚ್ಚಲಾಗಿದೆ ಎಂದು ವಿತ್ತ ಸಚಿವಾಲಯದ ಅಧೀನದಲ್ಲಿರುವ ‘ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್’(ಎಫ್‌ಐಯು) ವರದಿಯಲ್ಲಿ ತಿಳಿಸಲಾಗಿದೆ. 2014-15ರಲ್ಲಿ 80 ಲಕ್ಷ ನಗದು ವ್ಯವಹಾರ ವರದಿ(ಸಿಟಿಆರ್) ಪ್ರಕರಣ ದಾಖಲಾಗಿದ್ದರೆ 2015-16ರಲ್ಲಿ ಇದು ದ್ವಿಗುಣಗೊಂಡು 1.6 ಕೋಟಿಗೆ ತಲುಪಿದೆ. ಅಲ್ಲದೆ ಇದೇ ಅವಧಿಯಲ್ಲಿ ಶಂಕಾಸ್ಪದ ವ್ಯವಹಾರಗಳ ಪ್ರಮಾಣ 58,646ರಿಂದ 1,05,973ಕ್ಕೆ ತಲುಪಿದೆ.

 ಕಾಳಧನದ ವಿರುದ್ಧ ಅರಿವು ಹೆಚ್ಚಿರುವ ಕಾರಣ ಸರಕಾರ, ಬ್ಯಾಂಕ್‌ಗಳು ಮತ್ತಿತರ ಸಂಸ್ಥೆಗಳು ಶಂಕಾಸ್ಪದ ವ್ಯವಹಾರದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಅನುಸರಿಸಿರುವುದು ಕಾಳಧನ ಪತ್ತೆಗೆ ಪ್ರಮುಖ ಕಾರಣ ಎಂದು ವಿತ್ತ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಸಿಬಿಡಿಟಿ 154.89 ಕೋಟಿ ರೂ. ಅಘೋಷಿತ ಆದಾಯ ಪತ್ತೆಹಚ್ಚಿದ್ದರೆ, ಜಾರಿ ನಿರ್ದೇಶನಾಲಯ(ಇಡಿ) 107.47 ಕೋಟಿ ರೂ. ಮೊತ್ತದ ಅಕ್ರಮ ವ್ಯವಹಾರದ ಆದಾಯ ಮತ್ತು ಡಿಆರ್‌ಐ 300 ಕೋಟಿ ರೂ. ಮೊತ್ತದ ಅಕ್ರಮ ಆಸ್ತಿ ಪತ್ತೆಹಚ್ಚಿದ್ದು ಒಟ್ಟಾರೆ 562.36 ಕೋಟಿ ರೂ.ಮೊತ್ತದ ಕಾಳಧನ ಪತ್ತೆಹಚ್ಚಲಾಗಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News