ವಸತಿ ಯೋಜನೆ: ಮನೆ ಪೂರ್ತಿಗೊಳಿಸಿದವರಿಗೆ ಐದು ದಿನಗಳೊಳಗೆ ಹಣ ಬಿಡುಗಡೆ

Update: 2017-07-31 11:40 GMT

ಪಡುಬಿದ್ರೆ, ಜು.31: ವಸತಿ ಯೋಜನೆಯಲ್ಲಿ ಈಗಾಗಲೇ ಮನೆ ಪೂರ್ಣಗೊಳಿಸಿದ ಫಲಾನುಭವಿಗಳಿಗೆ ಐದು ದಿನಗಳೊಳಗೆ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಕಾಪು ಪುರಸಭಾ ಮುಖ್ಯಾಧಿಕಾರಿ ರಾಯಪ್ಪತಿಳಿಸಿದ್ದಾರೆ.

ಸೋಮವಾರ ನಡೆದ ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯ ಕಿರಣ್ ಆಳ್ವ ಮಾತನಾಡಿ, ಸದಸ್ಯರ ಗಮನಕ್ಕೆ ತಾರದೆ ಅಸಮರ್ಪಕವಾಗಿ ಪಕ್ಕಾ ಮನೆ ನಿರ್ಮಾಣದ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಲಾಗಿದೆ. ತಮಗಿಷ್ಟ ಬಂದಂತೆ ತಯಾರಿಸಿದ ಈ ಪಟ್ಟಿಯನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದಾಗ ರಾಯಪ್ಪ ಈ ರೀತಿ ಪ್ರತಿಕ್ರಿಯಿಸಿದರು.

ಪುರಸಭಾ ವಾಪ್ತಿಯಲ್ಲಿ 138 ಮನೆಗಳು ಮಂಜೂರಾಗಿದ್ದು, 42 ಫಲಾನುಭವಿಗಳು ಇನ್ನೂ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿಲ್ಲ. ಇದರಿಂದ ಅನುದಾನ ಸ್ಥಗಿತವಾಗಲಿದೆ. ಮನೆ ನಿರ್ಮಾಣಕ್ಕಾಗಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಸದಸ್ಯರ ಒಪ್ಪಿಗೆ ಪಡೆದು ಮಂಜೂರಾತಿ ನೀಡಲಾಗುವುದು ಎಂದರು.

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ಕುಟುಂಬಗಳ ಸ್ಥೂಲವಾದ ಸಮೀಕ್ಷೆ ನಡೆಸಬೇಕು. ಅ ವರ್ಗದ ವಸತಿ ಹಾಗೂ ಶೌಚಾಲಯರಹಿತನ್ನು ಗುರುತಿಸಿ ಆದ್ಯತೆ ಮೇರೆಗೆ ಸೌಲಭ್ಯ ನೀಡಬೇಕು ಎಂದು ವಿಪಕ್ಷ ನಾಯಕ ಅರುಣ್ ಶೆಟ್ಟಿ ಆಗ್ರಹಿಸಿದರು.

ಇದಕ್ಕುತ್ತರಿಸಿದ ರಾಯಪ್ಪ, ಪುರಸಭಾ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ, ಪಂಗಡ ಪಟ್ಟಿಯು ಇಲ್ಲ. ಈಗ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳ ಸಮೀಕ್ಷೆ ನಡೆಸಲಾಗುತ್ತಿದೆ. ಹಿಂದುಳಿದ ವರ್ಗಗಳ ಸ್ಥೂಲವಾದ ಪಟ್ಟಿಯನ್ನು ಶೀಘ್ರವಾಗಿ ತಯಾರಿಸಲಾಗುವುದು ಎಂದರು.

ಬೀದಿ ದೀಪ ಹೊರಗುತ್ತಿಗೆ: ಪುರಸಭಾ ವ್ಯಾಪ್ತಿಯಲ್ಲಿನ ವಿದ್ಯುತ್ ಕಂಬಗಳಿಗೆ ಕ್ರಮ ಸಂಖ್ಯೆ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಬೀದಿದೀಪಗಳ ನಿರ್ವಹಣೆಯನ್ನು ಹೊರಗುತ್ತಿಗೆಗೆ ನೀಡಿದ ಬಳಿಕ ದೀಪ ಆರಿಸುವ ಹೊಣೆಯನ್ನು ಅವರಿಗೆ ನೀಡಲಾಗುವುದು ಮುಖ್ಯಾಧಿಕಾರಿ ತಿಳಿಸಿದರು.

ಐದು ಕಡೆ ಪಾದಚಾರಿ ಮಾರ್ಗ ನಿರ್ಮಾಣದ ಬಗ್ಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಕೆಗೆ ಗುರುತಿಸಿದ ಸ್ಥಳಗಳ ಬಗ್ಗೆ ಯಾವುದೇ ಆಕ್ಷೇಪ ಬಂದಿಲ್ಲ. ಮಲ್ಲಾರಿನಲ್ಲಿರುವ ಗ್ರಾಪಂ ಕಟ್ಟಡದ ಒಂದು ಕೋಣೆಯನ್ನು ನ್ಯಾಯಬೆಲೆ ಅಂಗಡಿಗೆ ನೀಡಲು ಅವಕಾಶವಿದೆ. ಪುರಸಭಾ ವ್ಯಾಪ್ತಿಯಲ್ಲಿ ನಡೆಯುವ ತಾಲೂಕು ಹಾಗೂ ಜಿಲ್ಲಾ ಮಟ್ಟದ ಶಾಲಾ ಕ್ರೀಡಾಕೂಟಗಳಿಗೆ ಸಹಾಯಧನ ನೀಡಲು ಪುರಸಭೆ ಬದ್ಧವಿದೆ ಎಂದು ರಾಯಪ್ಪ ತಿಳಿಸಿದರು.

ಲಕ್ಷ್ಮೀಶ ತಂತ್ರಿ ಮಾತನಾಡಿ, ಪುರಸಭಾ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ನಾಯಿಗಳ ಸಂತಾನಹರಣಕ್ಕಾಗಿ ಟೆಂಡರ್ ವಹಿಸಿಕೊಂಡವರು ಬರುವ ಹೊತ್ತಿಗೆ ಅವುಗಳ ಸಂಖ್ಯೆ ಸಾವಿರಕ್ಕೇರಲಿದೆ ಎಂದು ಆಕ್ಷೇಪಿಸಿದರು.

ಸಭೆಯಲ್ಲಿ ಪುರಸಭಾಧ್ಯಕ್ಷೆ ಸೌಮ್ಯಾ, ಉಪಾಧ್ಯಕ್ಷ ಕೆ.ಎಚ್.ಉಸ್ಮಾನ್, ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ಮೂಳೂರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News