ವ್ಯಾಪಾರ, ಉತ್ತರ ಕೊರಿಯದ ಪರಮಾಣು ಕಾರ್ಯಕ್ರಮ ನಡುವೆ ನಂಟು ಬೇಡ: ಅಮೆರಿಕಕ್ಕೆ ಚೀನಾ
Update: 2017-07-31 20:06 IST
ಬೀಜಿಂಗ್, ಜು. 31: ಅಮೆರಿಕವು ವ್ಯಾಪಾರ ಮತ್ತು ಉತ್ತರ ಕೊರಿಯದ ಪರಮಾಣು ಕಾರ್ಯಕ್ರಮ ಕುರಿತ ಚರ್ಚೆಯ ನಡುವೆ ನಂಟು ಕಲ್ಪಿಸಬಾರದು ಎಂದು ಚೀನಾ ಸೋಮವಾರ ಹೇಳಿದೆ.
ಅಮೆರಿಕದೊಂದಿಗಿನ ವ್ಯಾಪಾರದಿಂದ ಚೀನಾ ಭಾರೀ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುತ್ತಿದ್ದರೂ, ಉತ್ತರ ಕೊರಿಯದ ವಿರುದ್ಧ ಅದು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ ಬಳಿಕ ಚೀನಾ ಈ ಪ್ರತಿಕ್ರಿಯೆ ನೀಡಿದೆ.
‘‘ಉತ್ತರ ಕೊರಿಯ ಪರಮಾಣು ವಿಷಯ ಮತ್ತು ಚೀನಾ-ಅಮೆರಿಕ ವ್ಯಾಪಾರ ಸಂಪೂರ್ಣವಾಗಿ ಪ್ರತ್ಯೇಕ ಕ್ಷೇತ್ರಗಳಲ್ಲಿರುವ ಎರಡು ವಿಷಯಗಳು ಎಂಬುದಾಗಿ ನಾವು ಭಾವಿಸಿದ್ದೇವೆ’’ ಎಂದು ಚೀನಾದ ಉಪ ವಾಣಿಜ್ಯ ಸಚಿವ ಕಿಯಾನ್ ಕೆಮಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘‘ಈ ಎರಡು ವಿಷಯಗಳು ಪರಸ್ಪರ ಸಂಬಂಧ ಹೊಂದಿಲ್ಲ. ಹಾಗಾಗಿ, ಅವುಗಳ ಬಗ್ಗೆ ಜೊತೆಯಾಗಿ ಚರ್ಚಿಸಬಾರದು’’ ಎಂದರು.