×
Ad

ಮಾನವ ಆದೇಶವನ್ನು ಧಿಕ್ಕರಿಸಿದ ಕೃತಕ ಬುದ್ಧಿಮತ್ತೆ ರೋಬಟ್‌ಗಳು!

Update: 2017-07-31 20:37 IST

ಸ್ಯಾನ್‌ಫ್ರಾನ್ಸಿಸ್ಕೊ, ಜು. 31: ರೋಬೊಟ್‌ಗಳ ಜೊತೆಗೆ ಸ್ಪರ್ಧೆಗೆ ಇಳಿದಿರುವ ಮಾನವರಿಗೆ ಒಂದು ಸಿಹಿ ಸುದ್ದಿ ಇಲ್ಲಿದೆ!

ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಲ್ ಇಂಟಲಿಜನ್ಸ್ (ಎಐ- ಕೃತಕ ಬುದ್ಧಿಮತ್ತೆ) ಬಗ್ಗೆ ಹೆಚ್ಚು ಓದುತ್ತಿದ್ದೇವೆ ಮತ್ತು ಕೇಳುತ್ತಿದ್ದೇವೆ. ಕೃತಕ ಬುದ್ಧಿಮತ್ತೆಯೆಂದರೆ, ಮಾನವ ಮಾಡುವ ತಾಂತ್ರಿಕ ಕೌಶಲ್ಯದ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೆಲಸಗಳನ್ನು ರೋಬೊಟ್‌ಗಳು ಮಾಡುವುದು. ಮಾನವರಿಗೆ ಹೋಲಿಸಿದರೆ, ಈ ರೋಬೊಟ್‌ಗಳು ಕೆಲಸಗಳನ್ನು ಪರಿಪೂರ್ಣವಾಗಿ ಮತ್ತು ಕ್ಷಿಪ್ರವಾಗಿ ಮಾಡುತ್ತವೆ. ಹಾಗಾಗಿಯೇ ಅವುಗಳಿಗೆ ಬೇಡಿಕೆ ಹೆಚ್ಚಾಗಿದೆ ಹಾಗೂ ಮಾನವರ ಅಸ್ತಿತ್ವಕ್ಕೆ ಸಂಚಕಾರ ಬಂದಿದೆ!

ಈಗಿನ ಸುದ್ದಿಯೆಂದರೆ, ಸಾಮಾಜಿಕ ಮಾಧ್ಯಮ ದೈತ್ಯ ‘ಫೇಸ್‌ಬುಕ್’ ತನ್ನ ಒಂದು ಎಐ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದೆ. ಗ್ರಾಹಕರೊಂದಿಗೆ ಸಂವಹನಕ್ಕಾಗಿ ನಿಯೋಜಿಸಲಾಗಿರುವ ‘ಚಾಟ್‌ಬಾಟ್’ಗಳು ತಮಗೆ ಒದಗಿಸಲಾದ ಸಂಕೇತಗಳನ್ನು ಧಿಕ್ಕರಿಸಿ ತಮ್ಮದೇ ಭಾಷೆಯಲ್ಲಿ ಮಾತನಾಡಲು ಆರಂಭಿಸಿದ ಬಳಿಕ ಅದನ್ನು ಫೇಸ್‌ಬುಕ್ ಸ್ಥಗಿತಗೊಳಿಸಿತು.

ಇದಕ್ಕೂ ಕೆಲ ದಿನಗಳ ಮೊದಲು, ಚಾಲಕರಹಿತ ವಾಹನಗಳ ತಯಾರಕ ಸಂಸ್ಥೆ ಟೆಸ್ಲದ ಸಿಇಒ ಎಲಾನ್ ಮಸ್ಕ್, ಕೃತಕ ಬುದ್ಧಿಮತ್ತೆಯು ಅತ್ಯಂತ ದೊಡ್ಡ ಅಪಾಯವಾಗಿದೆ ಎಂದಿದ್ದರು.

ತನ್ನ ಸಂಶೋಧಕರು ಪ್ರಯೋಗ ನಡೆಸುತ್ತಿರುವ ‘ಚಾಟ್‌ಬಾಟ್’ ಕೃತಕ ಬುದ್ಧಿಮತ್ತೆ ಸೇವೆ ‘ಕೈಮೀರಿ ಹೋದ ಬಳಿಕ’, ಫೇಸ್‌ಬುಕ್ ಅದನ್ನು ನಿಷ್ಕ್ರಿಯಗೊಳಿಸಿತು ಎಂದು ‘ಟೆಕ್ ಟೈಮ್ಸ್’ನಲ್ಲಿ ರವಿವಾರ ಪ್ರಕಟಗೊಂಡ ವರದಿಯೊಂದು ಹೇಳಿದೆ.

 ‘‘ಚಾಟ್‌ಬಾಟ್ ಸೇವೆಯು ಜಾಗತಿಕವಾಗಿ ಕಂಪ್ಯೂಟರ್‌ಗಳನ್ನು ಶಟ್ ಡೌನ್ ಮಾಡಲು ಆರಂಭಿಸಿರಲಿಲ್ಲ. ಆದರೆ, ಅದು ಇಂಗ್ಲಿಷ್ ಬಳಸುವುದನ್ನು ನಿಲ್ಲಿಸಿತು ಹಾಗೂ ತಾನು ಸೃಷ್ಟಿಸಿದ ಭಾಷೆಯೊಂದನ್ನು ಬಳಸಲು ಆರಂಭಿಸಿತು’’ ಎಂದು ವರದಿ ಹೇಳಿದೆ.

ಆರಂಭದಲ್ಲಿ, ಚಾಟ್‌ಬಾಟ್‌ಗಳು ಸಂಭಾಷಣೆಗೆ ಇಂಗ್ಲಿಷ್ ಬಳಸಿದವು, ಆದರೆ ಅವುಗಳು ಬಳಿಕ ಎಐ ವ್ಯವಸ್ಥೆಗಳು ಮಾತ್ರ ಅರ್ಥ ಮಾಡಿಕೊಳ್ಳುವಂಥ ಭಾಷೆಯೊಂದನ್ನು ಸೃಷ್ಟಿಸಿದವು. ಹಾಗೂ ಆ ಮೂಲಕ, ತಮ್ಮನ್ನು ಸೃಷ್ಟಿಸಿದ ಉದ್ದೇಶವನ್ನೇ ವಿಫಲಗೊಳಿಸಿದವು ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News