ಸಿಆರ್‌ಪಿಎಫ್,ಬಿಎಸ್‌ಎಫ್‌ನಲ್ಲಿ ಕಳಪೆ ಆಹಾರ ಕುರಿತ ದೂರುಗಳಲ್ಲಿ ಹುರುಳಿಲ್ಲ: ಕಿರಣ್ ರಿಜಿಜು
ಹೊಸದಿಲ್ಲಿ,ಆ.1: ಸಿಆರ್‌ಪಿಎಫ್, ಬಿಎಸ್‌ಎಫ್ ಸಿಬ್ಬಂದಿಗಳಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂಬ ದೂರುಗಳಲ್ಲಿ ಯಾವುದೇ ಹುರುಳಿಲ್ಲ ಎನ್ನುವುದು ಕಂಡುಬಂದಿದೆ ಎಂದು ಸಹಾಯಕ ಗೃಹಸಚಿವ ಕಿರಣ್ ರಿಜಿಜು ಅವರು ಮಂಗಳವಾರ ಲೋಕಸಭೆ ಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.
ಎಲ್ಲ ಪಡೆಗಳು ಕುಂದುಕೊರತೆ ನಿವಾರಣೆಗಾಗಿ ತಮ್ಮದೇ ಆದ ಪ್ರಬಲ ವ್ಯವಸ್ಥೆಗಳನ್ನು ಹೊಂದಿವೆ ಎಂದರು.
ಕಳಪೆ ಆಹಾರ ಪೂರೈಕೆ ಬಗ್ಗೆ ದೂರುಗಳನ್ನು ಸ್ವೀಕರಿಸಿರುವುದಾಗಿ ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್ ವರದಿ ಮಾಡಿದ್ದವು. ಇವೆರಡೂ ಪಡೆಗಳು ನಡೆಸಿದ ವಿಚಾರಣೆ ಯಲ್ಲಿ ಈ ದೂರುಗಳಲ್ಲಿ ಯಾವುದೇ ಹುರುಳಿಲ್ಲ ಎನ್ನುವುದು ಕಂಡುಬಂದಿದೆ ಎಂದು ಅವರು ತಿಳಿಸಿದರು.
ಅಧಿಕಾರಿಗಳು ನೆಲೆಗಳಿಗೆ ತಮ್ಮ ಭೇಟಿ ಸಂದರ್ಭದಲ್ಲಿ ಅಲ್ಲಿಯ ವಾಸಸ್ಥಿತಿ,ಸಿಬ್ಬಂದಿಗಳಿಗೆ ಒದಗಿಸಲಾಗುವ ಬಟ್ಟೆ, ಆಹಾರ ಮತ್ತು ಉಪಕರಣಗಳ ಬಗ್ಗೆ ತನಿಖೆ ನಡೆಸಲು ಹಾಗೂ ಸಿಬ್ಬಂದಿಗಳಿಂದ ಮುಕ್ತ ಮರುಮಾಹಿತಿ ಪಡೆದುಕೊಳ್ಳಲು ಉಪಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಪಡೆಗಳಿಗೆ ಸೂಚಿಸಿದೆ.
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಗಳು ತಮ್ಮ ದೂರುಗಳನ್ನು ದಾಖಲಿಸಲು ಅನುಕೂಲವಾಗುವಂತೆ ಸಚಿವಾಲಯವು ಆ್ಯಪ್‌ವೊಂದನ್ನು ಬಿಡುಗಡೆ ಗೊಳಿಸಿದೆ ಎಂದೂ ರಿಜಿಜು ತಿಳಿಸಿದರು.