ಹಣಕಾಸು ಕ್ಷೇತ್ರದಲ್ಲಿ 50 ಸೈಬರ್ ದಾಳಿಗಳು: ಅಹಿರ್

Update: 2017-08-01 13:46 GMT

ಹೊಸದಿಲ್ಲಿ,ಆ.1: ನವಂಬರ್,2016ರಿಂದ 2017,ಜೂನ್‌ವರೆಗೆ 19 ಹಣಕಾಸು ಸಂಸ್ಥೆಗಳ ಮೇಲೆ ಒಟ್ಟು 50 ಸೈಬರ್ ದಾಳಿಗಳು ನಡೆದಿರುವುದು ವರದಿಯಾಗಿದೆ. ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (ಸಿಇಆರ್‌ಟಿ-ಇನ್)ವು ಈ ಮಾಹಿತಿಯನ್ನೊದಗಿಸಿದೆ ಎಂದು ಸಹಾಯಕ ಗೃಹಸಚಿವ ಹಂಸರಾಜ್ ಗಂಗಾರಾಮ ಅಹಿರ್ ಅವರು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.

ಪ್ರಸಕ್ತ ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್ ಮತ್ತು ಇತರ ನಗದುರಹಿತ ನೆಟ್‌ವರ್ಕ್ ಗಳು ಸೈಬರ್ ದಾಳಿಗೊಳಗಾಗಿದ್ದು ವರದಿಯಾಗಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸು ತ್ತಿದ್ದರು.

ಆನ್‌ಲೈನ್ ಸುರಕ್ಷತೆಯ ಬಗ್ಗೆ ಆರ್‌ಬಿಐ ಬ್ಯಾಂಕುಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ ಎಂದು ಅವರು ತಿಳಿಸಿದರು.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಆನ್‌ಲೈನ್ ಪಾವತಿಯ ಸುರಕ್ಷತೆಗಾಗಿ ಡಿಜಿಟಲ್ ಪಾವತಿ ವಿಭಾಗವನ್ನು ಸೃಷ್ಟಿಸಿದೆ ಎಂದ ಅವರು, ಸೈಬರ್ ಭದ್ರತೆ ಸನ್ನದ್ಧತೆಯನ್ನು ಪರೀಕ್ಷಿಸಲು ಈವರೆಗೆ ಹಣಕಾಸು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸೇರಿದ 148 ಸಂಸ್ಥೆಗಳನ್ನೊಳಗೊಂಡು ಸೈಬರ್ ಭದ್ರತೆ ಅಣಕು ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದರು.

ಸೈಬರ್ ಭದ್ರತೆಗಾಗಿ 1,000 ಕೋ.ರೂ.ಗಳ ಪ್ರತ್ಯೇಕ ಸಂಂಶೋಧನೆ ಮತ್ತು ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಲಾಗಿದ್ದು, ತಾಂತ್ರಿಕ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸಲು ಮುಂದಿನ ಐದು ವರ್ಷಗಳಲ್ಲಿ ಇದನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ ಅವರು, ಇದರ ಜೊತೆಗೆ ಸೈಬರ್ ಅಪರಾಧಗಳನ್ನು ಎದುರಿಸಲು ಮೂಲಸೌಕರ್ಯ ಮತ್ತು ಸಾಮರ್ಥ್ಯ ನಿರ್ಮಾಣಕ್ಕಾಗಿ ಒಟ್ಟು 195.83 ಕೋ.ರೂ.ಗಳ ಅಂದಾಜು ವೆಚ್ಚದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸೈಬರ್ ಅಪರಾಧಗಳ ತಡೆ ಹೆಸರಿನಡಿ ಕೇಂದ್ರ ಕ್ಷೇತ್ರ ಯೋಜನೆಗೆ ಸರಕಾರವು ಒಪ್ಪಿಗೆ ನೀಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News