ಆಳ್ವಾಸ್ ಸಂಸ್ಥೆ ಹಾಸ್ಟೆಲ್‌ ನಡೆಸಲು ಅನುಮತಿ ಪಡೆದಿಲ್ಲ: ಉಗ್ರಪ್ಪ

Update: 2017-08-01 18:16 GMT

1 ವಾರದೊಳಗೆ ಕ್ರಮದ ಬಗ್ಗೆ ವರದಿಗೆ ಸೂಚನೆ

ಮಂಗಳೂರು, ಆ.1: "ಮೂಡುಬಿದಿರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಹೊಸ ಪ್ರೌಢಶಾಲೆಗೆ 2009-10ನೆ ಸಾಲಿನಲ್ಲಿ ಅನುಮತಿ ಪಡೆದುಕೊಂಡಿದೆ. ಆದರೆ ಹಾಸ್ಟೆಲ್‌ಗಾಗಿ ಎಲ್ಲಿಯೂ ಅನುಮತಿ ಪಡೆಯಲಾಗಿಲ್ಲ. ಈ ರೀತಿ ಶಿಕ್ಷಣ ಸಂಸ್ಥೆಗಳು ನಡೆಸಲು ಅವಕಾಶವಿದೆಯೇ?"
ಇದು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣದ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪರ ಪ್ರಶ್ನೆ.

ಈ ಪ್ರಶ್ನೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕಸಿವಿಸಿಗೊಳಿಸಿತು. ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ತೀಕ್ಷ್ಣವಾಗಿ ಪ್ರಶ್ನಿಸಿದ ಉಗ್ರಪ್ಪರು, ಒಂದು ವಾರದಲ್ಲಿ ಪ್ರಕರಣದ ಕುರಿತಂತೆ ಸಮಿತಿ ಸಲ್ಲಿಸಲಿರುವ ವರದಿಯಲ್ಲಿ ಪ್ರಕರಣದಲ್ಲಿ ಜಿಲ್ಲಾಡಳಿತದ ನಿರ್ಲಕ್ಷದ ಬಗ್ಗೆಯೂ ಸರಕಾರದ ಗಮನಕ್ಕೆ ತರುವುದಾಗಿ ಹೇಳಿದರು.

ಕಾವ್ಯಾಳದ್ದು ಸಾವು ಅಸಹಜ ಎಂಬುದಾಗಿ ಅವರ ಪೋಷಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಸಮಿತಿಯು ಇಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದವರು ಹೇಳಿದರು.

ಭೇಟಿಯ ವೇಳೆ ಆಶ್ಚರ್ಯಕರ ಸಂಗತಿಗಳು ಸಮಿತಿ ಗಮನಕ್ಕೆ ಬಂದಿವೆ. ಶಿಕ್ಷಣ ಸಂಸ್ಥೆಯು ಸರಕಾರದಿಂದ ಪ್ರೌಢಶಾಲೆಗೆ ಮಾತ್ರ ಅನುಮತಿ ಪಡೆದುಕೊಂಡಿದೆ. ಅಲ್ಲಿ ವಸತಿ ನಿಲಯವನ್ನೂ ನಡೆಸಲಾಗುತ್ತಿದೆ. ಆದರೆ ಅದನ್ನು ವಸತಿ ನಿಲಯ ಎಂದೂ ಕರೆಯಲು ಸಾಧ್ಯವಿಲ್ಲವಾಗಿದೆ. ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು, ವಸತಿ ನಿಲಯಗಳು ಪಾಲಿಸಬೇಕಾದ ಮಾನದಂಡ, ಮಾರ್ಗಸೂಚಿಗಳನ್ನು ಅಲ್ಲಿ ಪಾಲಿಸಲಾಗುತ್ತಿಲ್ಲ. ಅಲ್ಲಿ ನಡೆಸಲಾಗುತ್ತಿರುವ ವಸತಿ ಶಾಲೆಯಲ್ಲಿ 26,000 ವಿದ್ಯಾರ್ಥಿಗಳು, 6,000 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇರುವುದಾಗಿ ತಿಳಿಸಿದ್ದಾರೆ. ಇತರ ಕೆಲಸ ಕಾರ್ಯ ಸೇರಿದಂತೆ ಆ ಸಂಸ್ಥೆಗೆ ಪ್ರತಿನಿತ್ಯ ಸುಮಾರು 35,000 ಜನರು ಬಂದು ಹೋಗುತ್ತಿರುತ್ತಾರೆ. ಕಳೆದ 10 ವರ್ಷಗಳಲ್ಲಿ ಎಂಟು ಅಸಹಜ ಸಾವು ಆಗಿರುವುದಾಗಿ ಆಡಳಿತ ಮಂಡಳಿಯವರೇ ಮಾಹಿತಿ ನೀಡಿದ್ದಾರೆ. ಕಳೆದ ಸಭೆಯಲ್ಲಿ ಧರ್ಮಸ್ಥಳ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ಅಸಹಜ ಸಾವು ಪ್ರಕರಣಗಳ ಬಗ್ಗೆ ಪ್ರಸ್ತಾಪ ಮಾಡಲಾಗಿದ್ದರೂ ಇಂತಹ ಪ್ರಕರಣಗಳಿಗೆ ಇನ್ನೂ ನಿಯಂತ್ರಣ ಹೇರಲಾಗದಿರುವುದಕ್ಕೆ ಜಿಲ್ಲಾಡಳಿತದ ನಿರ್ಲಕ್ಷವೂ ಕಾರಣ ಎಂದು ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಕಾವ್ಯಾ ಸಾವಿನಲ್ಲಿ ಆಳ್ವಾಸ್ ಸಂಸ್ಥೆಯ ಅಸಡ್ಡೆ ಮೇಲ್ನೋಟಕ್ಕೆ ಗೋಚರ
ಕಾವ್ಯಾ ಸಾವಿನ ಪ್ರಕರಣದ ಕುರಿತಂತೆ ಸಮಿತಿಯ ವಿಚಾರಣೆಯ ಸಂದರ್ಭ, ಎಲ್ಲೋ ಒಂದು ಕಡೆ ಆಡಳಿತ ಮಂಡಳಿಯ ಅಸಡ್ಡೆ ಪ್ರವೃತ್ತಿಯೂ ಮೇಲ್ನೋಟಕ್ಕೆ ಗೋಚರಿಸಿದೆ. ಸಂಸ್ಥೆಯ 5ನೆ ಮಹಡಿಯಲ್ಲಿ ವಸತಿ ನಿಲಯವಿದೆ. ಅದಕ್ಕೆ ಲಿಫ್ಟ್ ವ್ಯವಸ್ಥೆ ಇಲ್ಲ. ವಸತಿ ನಿಲಯ ದನದ ಕೊಟ್ಟಿಗೆಗಿಂತ ಕೆಳಮಟ್ಟದಲ್ಲಿದೆ. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಮನೆಯವರಿಗೂ ಬಂದು ಉಳಿದುಕೊಳ್ಳಲು ಅವಕಾಶ ಇರುವುದರಿಂದ, ವಿದ್ಯಾರ್ಥಿನಿ ಆತ್ಮಹತ್ಯೆಗೆ ಸೀರೆ ದೊರಕಿದೆ ಎಂಬ ಉತ್ತರವನ್ನು ಆಡಳಿತ ಮಂಡಳಿ ನೀಡಿದೆ. ಮೃತದೇಹವನ್ನು ಯಾಕೆ ಬಿಚ್ಚಿದ್ದು ಎಂಬ ಪ್ರಶ್ನೆಗೆ, ಕಾಲು ನೆಲದಲ್ಲಿತ್ತು, ಆಕೆ ಸತ್ತಿಲ್ಲ ಎಂಬ ಕಾರಣಕ್ಕೆ ಬಿಚ್ಚಿದ್ದೇವೆ ಎಂಬ ಉತ್ತರ ನೀಡಿದ್ದಾರೆ. ಆದರೆ ಸಹಜ ಆತ್ಮಹತ್ಯೆಯ ವೇಳೆ ಸಂಭವಿಸಿರಬಹುದಾದ ಯಾವುದೇ ಪ್ರಕ್ರಿಯೆಗಳು ಈ ಪ್ರಕರಣದಲ್ಲಿ ಕಂಡು ಬಂದಿಲ್ಲದಿರುವುದು ಇದೊಂದು ಅಸಹಜ ಸಾವು ಎಂಬುದನ್ನು ಪುಷ್ಟೀಕರಿಸುತ್ತದೆ ಎಂದು ವಿಧಾನ ಪರಿಷತ್‌ನ ಸದಸ್ಯರೂ ಆಗಿರುವ ವಿ.ಎಸ್. ಉಗ್ರಪ್ಪ ತಿಳಿಸಿದರು.

ಉಗ್ರಪ್ಪರ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ಪ್ರತಿಕ್ರಿಯಿಸುತ್ತಾ, ಶಿಕ್ಷಣ ಸಂಸ್ಥೆಯಲ್ಲಿ ಹಾಸ್ಟೆಲ್ ನಡೆಸಲು ಪರವಾನಿಗೆ ಇಲ್ಲ. ಪ್ರತ್ಯೇಕ ಪರವಾನಿಗೆ ಇಲ್ಲದಿರುವ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರೌಢಶಾಲಾ ಶಿಕ್ಷಕರು, ವಾರ್ಡನ್‌ಗಳ ವೇತನ ನಿರ್ದೇಶನವೂ ಪಾಲನೆಯಿಲ್ಲ!
ತಮ್ಮ ಭೇಟಿಯ ಸಂದರ್ಭ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ಪ್ರಾಂಶುಪಾಲರು, ವಾರ್ಡನ್‌ಗಳಿಗೆ 7,500 ರೂ.ನಿಂದ ಗರಿಷ್ಠ 24,000 ರೂ.ವರೆಗೆ ವೇತನವನ್ನು ನೀಡಲಾಗುತ್ತಿದೆ. ಆದರೆ ನಿರ್ದೇಶನದ ಪ್ರಕಾರ ಪ್ರೌಢಶಾಲಾ ಮುಖ್ಯಸ್ಥರಿಗೆ 35,000 ರೂ.ನಿಂದ 40,000 ರೂ.ವರೆಗೆ ವೇತನ ನೀಡಬೇಕು. ಕಟ್ಟಡಕ್ಕೆ ಸೆಟ್‌ಬ್ಯಾಕ್ ಇಲ್ಲ. ವಿಶಾಖಾ ಗೈಡ್‌ಲೈನ್ಸ್ ಪ್ರಕಾರ ಹೆಣ್ಣುಮಕ್ಕಳ ರಕ್ಷಣೆ ದೃಷ್ಟಿಯಿಂದ ಸಮಿತಿಯನ್ನೂ ರಚಿಸಲಾಗಿಲ್ಲ. ಸಾವಿರಾರು ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತರಿಪಡಿಸುವವರು ಯಾರು ಎಂದು ಉಗ್ರಪ್ಪ ಅಧಿಕಾರಿಗಳನ್ನು ತರಾಟೆಗೈದರು.

ಸಭೆಯಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ವೇತನದ ಕುರಿತಂತೆ ಡಿಡಿಪಿಐ ಶಿವರಾಮಯ್ಯ ನೀಡಿದ ಉತ್ತರದಿಂದ ತೃಪ್ತರಾಗದ ಉಗ್ರಪ್ಪ, ನೀವೇನು ಮಾತನಾಡುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರಲ್ಲದೆ, ರಾಜ್ಯ ಸರಕಾರಕ್ಕೆ ಒಂದು ವಾರದಲ್ಲಿ ಸಮಿತಿ ಸಲ್ಲಿಸಲಿರುವ ವರದಿಯಲ್ಲಿ ನಿಮ್ಮ ನಿರ್ಲಕ್ಷದ ಬಗ್ಗೆಯೂ ಉಲ್ಲೇಖಿಸುವುದಾಗಿ ಹೇಳಿದರು.

ಆಳ್ವಾಸ್ ಸಂಸ್ಥೆಯಲ್ಲಿ ನೀಡುತ್ತಿರುವ ಶಿಕ್ಷಣ ಸೇವೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಅಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ತರಾವರಿ ರೀತಿಯಲ್ಲಿ ಶುಲ್ಕವನ್ನು ಪಡೆಯಲಾಗುತ್ತದೆ. ಇದಕ್ಕೆ ನಿಯಂತ್ರಣ ಇಲ್ಲವಾಗಿದೆ. ಶುಲ್ಕ ಸಂಗ್ರಹಕ್ಕೆ ತೆರಿಗೆ ಪಾವತಿಯ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಜಿಲ್ಲಾಡಳಿತವು, ಎಲ್ಲಾ ಇಲಾಖೆಗಳಿಂದ ಸಮಗ್ರ ಮಾಹಿತಿಯನ್ನು ಒಂದು ವಾರದೊಳಗೆ ಸಮಿತಿಗೆ ನೀಡಬೇಕು. ಇಡೀ ರಾಜ್ಯಕ್ಕೆ ಈ ಘಟನೆ ಎಚ್ಚರಿಕೆಯಾಗಿ ಪರಿಣಮಿಸಬೇಕು ಎಂದು ಉಗ್ರಪ್ಪ ಹೇಳಿದರು.

ಸಭೆಯಲ್ಲಿ ಸಮಿತಿ ಸದಸ್ಯರಾದ ವೆನಿಸಾ, ವೆಂಕಟೇಶ್, ಪ್ರಭಾ ಎಸ್. ಡಾ. ಲೀಲಾ ಸಂಪಿಗೆ, ಜ್ಯೋತಿ, ವಿಮಲಾ, ವಸುಂಧರಾ ಭೂಪತಿ, ಡಿ.ಕೆ.ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.

ಪರಿಹಾರದ ಬಗ್ಗೆ ವರದಿಯಲ್ಲಿ ಶಿಫಾರಸು
ಶೂಟ್‌ಔಟ್ ಪ್ರಕರಣವೊಂದಕ್ಕೆ ಸಂಬಂಧಿಸಿ ಸಮಿತಿ ತನಿಖೆ ನಡೆಸಿ ಸಂತ್ರಸ್ತರಿಗೆ 50 ಲಕ್ಷ ರೂ. ಪರಿಹಾರಕ್ಕೆ ಶಿಫಾರಸ್ಸು ಮಾಡಿತ್ತು. ಈ ಪ್ರಕರಣದಲ್ಲಿಯೂ ಶಿಕ್ಷಣ ಸಂಸ್ಥೆಯ ನಿರ್ಲಕ್ಷ, ನ್ಯೂನತೆಗಳು ಗೋಚರಿಸಿರುವುದರಿಂದ ಸಂತ್ರಸ್ತ ವಿದ್ಯಾರ್ಥಿನಿಯ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಯೋಚನೆ ಮಾಡಬೇಕಾಗಿದೆ. ಸರಕಾರಕ್ಕೆ ಸಲ್ಲಿಸುವ ಸಮಿತಿ ವರದಿಯಲ್ಲಿ ಈ ಬಗ್ಗೆ ಶಿಫಾರಸು ಮಾಡಲಾಗುವುದು ಎಂದು ಉಗ್ರಪ್ಪ ಸಭೆಯಲ್ಲಿ ತಿಳಿಸಿದರು.

ಪ್ರತಿ ಇಲಾಖೆಗಳಲ್ಲೂ ಆಂತರಿಕ ದೂರು ನಿವಾರಣಾ ಸಮಿತಿಗೆ ನಿರ್ದೇಶನ
ಜಿಲ್ಲಾಡಳಿತವು 10ಕ್ಕಿಂತ ಮೇಲ್ಪಟ್ಟು ನೌಕರರನ್ನು ಹೊಂದಿರುವ ಪ್ರತಿಯೊಂದು ಇಲಾಖೆ, ಸಂಸ್ಥೆಗಳಲ್ಲಿ ಆಂತರಿಕ ದೂರು ನಿವಾರಣಾ ಸಮಿತಿ ಇರುವುದನ್ನು ಖಾತರಿಪಡಿಸಬೇಕು ಎಂದು ವಿ.ಎಸ್.ಉಗ್ರಪ್ಪ ನಿರ್ದೇಶನ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News