2018ರವರೆಗೆ ಅಗ್ಗ ಬೆಲೆಯಲ್ಲೇ ದೊರಕಲಿದೆ ಅಕ್ಕಿ, ಗೋಧಿ
ಹೊಸದಿಲ್ಲಿ,ಆ.1: ದೇಶದ 81 ಕೋಟಿ ಜನರಿಗೆ ಪ್ರತಿ ಕೆಜಿಗೆ 2 ರೂ. ಮತ್ತು 3 ರೂ.ನಂತೆ ಒದಗಿಸಲಾಗುತ್ತಿರುವ ಗೋಧಿ ಮತ್ತು ಅಕ್ಕಿಯ ಸಬ್ಸಿಡಿ ಬೆಲೆಗಳನ್ನು 2018ರವರೆಗೂ ಪರಿಷ್ಕರಿಸುವುದಿಲ್ಲ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ ವಿಲಾಸ್ ಪಾಸ್ವಾನ್ ಅವರು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.
ಆಹಾರ ಧಾನ್ಯಗಳ ಬೆಲೆಗಳನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಪರಿಷ್ಕರಿಸಲು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ,2013ರಲ್ಲಿ ಅವಕಾಶವಿದೆ. ಆದರೆ ಪ್ರಸಕ್ತ ಯೋಜನೆಯನ್ನು 2018ರವರೆಗೆ ಮುಂದುವರಿಸಲು ಸರಕಾರವು ನಿರ್ಧರಿಸಿದೆ ಎಂದರು.
ಯೋಜನೆಯಡಿ ಪ್ರತಿ ಕೆ.ಜಿ.ಗೋಧಿಯನ್ನು ಎರಡು ರೂ.ಗೆ, ಅಕ್ಕಿಯನ್ನು ಮೂರು ರೂ.ಗೆ ಮತ್ತು ಒರಟು ಧಾನ್ಯಗಳನ್ನು ಒಂದು ರೂ.ಗೆ ಒದಗಿಸಲಾಗುತ್ತದೆ. ಯಾರೂ ಹಸಿವೆಯಿಂದಿರದಂತೆ ನೋಡಿಕೊಳ್ಳುವುದು ರಾಜ್ಯ ಸರಕಾರಗಳ ಹೊಣೆಗಾರಿಕೆಯಾಗಿದೆ ಮತ್ತು ಯೋಜನೆಯನ್ನು ಸೂಕ್ತವಾಗಿ ಜಾರಿಗೊಳಿಸಲು ಕೇಂದ್ರವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪಾಸ್ವಾನ್ ಹೇಳಿದರು.
ದೇಶದ ದಾಸ್ತಾನು ಸಾಮರ್ಥ್ಯವನ್ನು ಹೆಚ್ಚಿಸಲು ಖಾಸಗಿ ಉದ್ಯಮಿಗಳು, ಕೇಂದ್ರಿಯ ಗೋದಾಮು ನಿಗಮ(ಸಿಡಬ್ಲುಸಿ)ಮತ್ತು ರಾಜ್ಯ ಸರಕಾರಿ ಏಜೆನ್ಸಿಗಳ ಮೂಲಕ ದಾಸ್ತಾನು ಸಾಮರ್ಥ್ಯ ನಿರ್ಮಾಣಕ್ಕಾಗಿ ಸರಕಾರವು 2008-09ರಲ್ಲಿ ಖಾಸಗಿ ಉದ್ಯಮಿಗಳ ಖಾತರಿ ಯೋಜನೆ(ಪಿಇಜಿ)ಯನ್ನು ರೂಪಿಸಿತ್ತು ಎಂದು ಹೇಳಿದರು.
ಈ ಯೋಜನೆಯಡಿ ಖಾಸಗಿ ಹೂಡಿಕೆದಾರರು ಅಥವಾ ರಾಜ್ಯ ಏಜೆನ್ಸಿಗಳು ಹೂಡಿಕೆ ಮತ್ತು ನಿರ್ಮಾಣವನ್ನು ಮಾಡುತ್ತಿದ್ದು, ಇದಕ್ಕೆ ಪ್ರತಿಯಾಗಿ ಖಾಸಗಿ ವ್ಯಕ್ತಿಗಳು ನಿರ್ಮಿಸಿದ ಗೋದಾಮನ್ನು 10 ವರ್ಷಗಳ ಅವಧಿಗೆ ಬಾಡಿಗೆಗೆ ಪಡೆದುಕೊಳ್ಳುವ ಖಾತರಿಯನ್ನು ಭಾರತೀಯ ಆಹಾರ ನಿಗಮ(ಎಫ್‌ಸಿಐ)ವು ನೀಡುತ್ತದೆ. ಸಿಡಬ್ಲುಸಿ ಅಥವಾ ರಾಜ್ಯ ಸರಕಾರಿ ಏಜೆನ್ಸಿಗಳಿಗೆ ಈ ಖಾತರಿಯು ಒಂಭತ್ತು ವರ್ಷ ಅವಧಿಯದಾಗಿರುತ್ತದೆ ಎಂದು ಪಾಸ್ವಾನ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಉಪಕ್ರಮದಂತೆ ಎಫ್‌ಸಿಐ ನೌಕರರು ಈಗ ಪಿಂಚಣಿ ಮತ್ತು ನಿವೃತ್ತಿ ನಂತರದ ವೈದ್ಯಕೀಯ ಸೌಲಭ್ಯಗಳನ್ನು ಪಡೆಯುತ್ತಾರೆ ಎಂದೂ ಅವರು ಹೇಳಿದರು.