ರಾಜತಾಂತ್ರಿಕರ ಕಡಿತಕ್ಕೆ ರಶ್ಯ ಆದೇಶ: ಆಯ್ಕೆಗಳನ್ನು ಪರಿಶೀಲಿಸುತ್ತಿರುವ ವಾಶಿಂಗ್ಟನ್
ವಾಶಿಂಗ್ಟನ್, ಆ. 1: ತನ್ನ ವಿರುದ್ಧ ಅಮೆರಿಕ ವಿಧಿಸುತ್ತಿರುವ ಆರ್ಥಿಕ ದಿಗ್ಬಂಧನಗಳಿಗೆ ಪ್ರತೀಕಾರವಾಗಿ, ದೇಶದಲ್ಲಿರುವ ಅಮೆರಿಕ ರಾಜತಾಂತ್ರಿಕರ ಸಂಖ್ಯೆಯನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸುವಂತೆ ರಶ್ಯ ಆದೇಶ ನೀಡಿದ ಬಳಿಕ, ಅಮೆರಿಕವು ತನ್ನ ಆಯ್ಕೆಗಳನ್ನು ಪರಿಶೀಲಿಸುತ್ತಿದೆ.
ಅದೇ ವೇಳೆ, ಕಾಂಗ್ರೆಸ್ ಈಗಾಗಲೇ ಅನುಮೋದನೆ ನೀಡಿರುವ ದಿಗ್ಬಂಧನೆ ಮಸೂದೆಗೆ ಸಹಿ ಹಾಕುವ ಇಂಗಿತವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ. ಅವರು ಸಹಿ ಹಾಕಿದ ಬಳಿಕ ಮಸೂದೆ ಕಾನೂನಾಗಿ ಜಾರಿಯಾಗುತ್ತದೆ.
ರಶ್ಯದಲ್ಲಿರುವ ಅಮೆರಿಕನ್ ರಾಯಭಾರ ಕಚೇರಿಯ 755 ಅಮೆರಿಕನ್ ಮತ್ತು ರಶ್ಯ ಸಿಬ್ಬಂದಿಯನ್ನು ಕಡಿತಗೊಳಿಸುವಂತೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೀಡಿದ ಆದೇಶದ ಬಗ್ಗೆ ಕೇಳಿದ ಪ್ರಶ್ನೆಗೆ ಸೋಮವಾರ ಶ್ವೇತಭವನದ ವಕ್ತಾರೆ ಸಾರಾ ಹಕಬೀ ಸ್ಯಾಂಡರ್ಸ್ ಉತ್ತರಿಸುತ್ತಿದ್ದರು.
ವಾರಾಂತ್ಯದಲ್ಲಿ ನಡೆದ ಬೆಳವಣಿಗೆಯು ‘ವಿಷಾದನೀಯ’ ಎಂದು ವಿದೇಶ ಇಲಾಖೆಯ ಅಧಿಕಾರಿಯೊಬ್ಬರು ಬಣ್ಣಿಸಿದರು.
‘‘ಸದ್ಯಕ್ಕೆ ನಾವು ನಮ್ಮ ಆಯ್ಕೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಇದರ ಬಗ್ಗೆ ಏನಾದರೂ ಹೇಳಲು ಇದ್ದಾಗ, ನಾವು ನಿಮಗೆ ತಿಳಿಸುತ್ತೇವೆ’’ ಎಂದು ಸ್ಯಾಂಡರ್ಸ್ ನುಡಿದರು.
ಮಸೂದೆಗೆ ಟ್ರಂಪ್ ಸಹಿ ಹಾಕುತ್ತಾರೆ ಎಂದು ವಕ್ತಾರೆ ಪುನರುಚ್ಚರಿಸಿದ್ದಾರಾದರೂ, ಯಾವಾಗ ಎಂಬುದನ್ನು ಹೇಳಲಿಲ್ಲ.
2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ನಡೆಸಿದೆಯೆನ್ನಲಾದ ಹಸ್ತಕ್ಷೇಪ ಮತ್ತು ಯುಕ್ರೇನ್‌ನ ಆಂತರಿಕ ವ್ಯವಹಾರಗಳಲ್ಲಿ ಅದು ನಡೆಸಿರುವ ಹಸ್ತಕ್ಷೇಪಗಳಿಗೆ ಪ್ರತಿಯಾಗಿ ಅದರ ವಿರುದ್ಧ ದಿಗ್ಬಂಧನ ವಿಧಿಸುವ ಮಸೂದೆಯನ್ನು ಅಮೆರಿಕ ಸೆನೆಟ್ ಗುರುವಾರ ಭಾರೀ ಬಹುಮತದಿಂದ ಅಂಗೀಕರಿಸಿದೆ.