ಅಮೆರಿಕ: ದಫನ ಭೂಮಿ ಮೇಲೆ ದುಷ್ಕರ್ಮಿಗಳಿಂದ ದಾಳಿ
Update: 2017-08-02 20:27 IST
ಮಿನಪೊಲಿಸ್, ಆ. 2: ಅಮೆರಿಕದ ಮಿನಪೊಲಿಸ್‌ನಲ್ಲಿರುವ ಮುಸ್ಲಿಮರ ದಫನ ಭೂಮಿಯೊಂದರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ದುಷ್ಕರ್ಮಿಗಳು ಇತ್ತೀಚೆಗೆ ಕ್ಯಾಸಲ್ ರಾಕ್ ಟೌನ್‌ಶಿಪ್‌ನಲ್ಲಿರುವ ಅಲ್ ಮಘ್ಫಿರಾ ದಫನಭೂಮಿಯನ್ನು ಪ್ರವೇಶಿಸಿ ಗೋಡೆಗಳ ಮೇಲೆ ಧರ್ಮವಿರೋಧಿ ಬರಹಗಳು ಮತ್ತು ಸ್ವಸ್ತಿಕ ಚಿಹ್ನೆಗಳನ್ನು ಸ್ಪ್ರೇ ಪೇಂಟ್ ಮೂಲಕ ಬರೆದಿದ್ದಾರೆ ಎಂದು ಕೌನ್ಸಿಲ್ ಆನ್ ಅಮೆರಿಕನ್-ಇಸ್ಲಾಮಿಕ್ ರಿಲೇಶನ್ಸ್‌ನ ಮಿನಸೋಟ ಘಟಕ ಹೇಳಿದೆ.
ದುಷ್ಕರ್ಮಿಗಳು ಗೋಡೆಗಳು, ಪೀಠೋಪಕರಣಗಳು ಮತ್ತು ಇತರ ಸೊತ್ತುಗಳಿಗೂ ಹಾನಿಯೆಸಗಿದ್ದಾರೆ ಎಂದು ಅದು ತಿಳಿಸಿದೆ. ಒಂದು ಸ್ಪ್ರೇ ಪೇಂಟ್ ಬರಹ ಹೀಗಿದೆ: ‘‘ಹೋಗಿ, ಇಲ್ಲದಿದ್ದರೆ ನೀವು ಸಾಯುತ್ತೀರಿ’’.
ಆರಂಭದಲ್ಲಿ ದಫನಭೂಮಿಗೆ ಕ್ಯಾಸಲ್ ರಾಕ್ ಟೌನ್‌ಶಿಪ್‌ನ ಪುರಸಭೆ ಅನುಮತಿ ನೀಡಿರಲಿಲ್ಲ. ಅಂತಿಮವಾಗಿ, ದಫನಭೂಮಿಗೆ ಶರತ್ತುಬದ್ಧ ಅನುಮತಿ ನೀಡುವಂತೆ ನ್ಯಾಯಾಲಯವೊಂದು ಆದೇಶ ನೀಡಬೇಕಾಗಿ ಬಂದಿತ್ತು.