×
Ad

ಇಮ್ರಾನ್ ಖಾನ್‌ರಿಂದ ಅಶ್ಲೀಲ ಸಂದೇಶ: ಅವರ ಪಕ್ಷದ ಸಂಸದೆಯಿಂದ ಆರೋಪ

Update: 2017-08-02 20:31 IST

ಇಸ್ಲಾಮಾಬಾದ್, ಆ. 2: ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ತನಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಹಾಗೂ ಪಕ್ಷದ ಮಹಿಳಾ ನಾಯಕಿಯರಿಗೆ ಕಿರುಕುಳ ಕೊಡುತ್ತಾರೆ ಎಂಬುದಾಗಿ ಪಕ್ಷದ ಸಂಸದೆಯೊಬ್ಬರು ಆರೋಪಿಸಿದ್ದಾರೆ.

2013ರಲ್ಲಿ ನ್ಯಾಶನಲ್ ಅಸೆಂಬ್ಲಿಗೆ ಮಹಿಳಾ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಆಯಿಶಾ ಗುಲಾಲೈ, ಪಕ್ಷವನ್ನು ತೊರೆಯುವ ತನ್ನ ನಿರ್ಧಾರವನ್ನೂ ಪ್ರಕಟಿಸಿದ್ದಾರೆ. ತನ್ನ ಗೌರವ ಮತ್ತು ಘನತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಾರೆ ಎಂದು ಅವರು ಹೇಳಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಲಾಲೈ, 64 ವರ್ಷದ ಇಮ್ರಾನ್ ಖಾನ್‌ರಿಂದಾಗಿ ಅವರ ಪಕ್ಷದಲ್ಲಿ ಮಹಿಳೆಯರ ಗೌರವ ಸುರಕ್ಷಿತವಾಗಿಲ್ಲ ಎಂದು ಹೇಳಿದರು.

ಖಾನ್‌ರನ್ನು ‘ನಕಲಿ ಪಠಾಣ್’ ಎಂದು ಕರೆದಿರುವ ಅವರು, ‘‘ಅವರೊಬ್ಬ ನಡತೆಗೆಟ್ಟ ಮನುಷ್ಯ, ಅವರು ತನ್ನನ್ನು ತಾನು ದೇವರು ಎಂದು ತಿಳಿದುಕೊಂಡಿದ್ದಾರೆ, ಆದರೆ, ಅವರ ವರ್ತನೆ ಅತ್ಯಂತ ಅಸಭ್ಯವಾಗಿದೆ’’ ಎಂದು ಆರೋಪಿಸಿದರು.

ತನಗೆ ಖಾನ್‌ರಿಂದ ಅಸಂಖ್ಯಾತ ಸಂದೇಶಗಳು ಬಂದಿವೆ ಹಾಗೂ ಮೊದಲ ಸಂದೇಶವನ್ನು 2013ರ ಅಕ್ಟೋಬರ್‌ನಲ್ಲಿ ಅವರ ಬ್ಲಾಕ್‌ಬೆರಿ ಮೊಬೈಲ್‌ನಿಂದ ಕಳುಹಿಸಲಾಗಿತ್ತು ಎಂದರು.

ಸಂದೇಶಗಳನ್ನು ಓದಿ ಹೇಳಲು ನಿರಾಕರಿಸಿದ ಗುಲಾಲೈ, ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಟೆಲಿಕಾಂ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಪತ್ರಕರ್ತರಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News