ಭಯೋತ್ಪಾದಕರಿಗೆ ಆರ್ಥಿಕ ನೆರವು : ಹಲವರ ವಿಚಾರಣೆ ನಡೆಸಿದ ಎನ್‌ಐಎ
ಹೊಸದಿಲ್ಲಿ, ಆ.2: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಮಿತಿ(ಎನ್‌ಐಎ)
ಹುರಿಯತ್ ನಾಯಕರು, ಅವರ ಬಂಧುಗಳು ಸೇರಿದಂತೆ ಹಲವರನ್ನು ವಿಚಾರಣೆ ನಡೆಸಿದೆ.
ಅಲ್ಲದೆ ಶ್ರೀನಗರದಲ್ಲಿ ಕಲ್ಲೆಸೆತದಲ್ಲಿ ತೊಡಗಿರುವ ಹಲವರನ್ನು ಗುರುತಿಸಿ ವಿಚಾರಣೆ ನಡೆಸಲಾಗಿದೆ ಎಂದು ಎನ್‌ಐಎ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಕಾಶ್ಮೀರದ ಏಳು ಮಂದಿ ಪ್ರತ್ಯೇಕತಾವಾದಿ ನಾಯಕರನ್ನು ಬಂಧಿಸಲಾಗಿದೆ. ನಯೀಮ್ ಖಾನ್, ಅಲ್ತಾಫ್ ಅಹ್ಮದ್ ಶಾ, ಅಫ್ತಾಬ್ ಹಿಲಾಲಿ ಶಾ ಅಲಿಯಾಸ್ ಶಾಹಿದ್-ಉಲ್- ಇಸ್ಲಾಂ, ಅಯಝ್ ಅಕ್ಬರ್ ಖಂಡೆ, ಪೀರ್ ಸಫಿವುಲ್ಲ, ಮೆಹ್ರಾಜುದ್ದಿನ್ ಕಲ್ವಾಲ್ ಮತ್ತು ಫರೂಕ್ ಅಹ್ಮದ್ ದಾರ್ ಅಲಿಯಾಸ್ ಬಿಟ್ಟ ಕರಾಟೆ ಇವರನ್ನು ಬಂಧಿಸಿ 10 ದಿನಗಳ ಎನ್‌ಐಎ ಕಸ್ಟಡಿಗೆ ನೀಡಲಾಗಿದೆ. ಅಲ್ತಾಫ್ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸಯ್ಯದ್ ಆಲಿಶಾ ಗಿಲಾನಿಯ ಅಳಿಯ.
ಸಯ್ಯದ್ ಆಲಿಶಾ ಗಿಲಾನಿಯ ನಿಕಟವರ್ತಿ , ವಕೀಲ ದೇವೇಂದರ್ ಸಿಂಗ್ ಬೆಹಾಲ್‌ನ ನಿವಾಸದ ಮೇಲೆ ರವಿವಾರ ಎನ್‌ಐಎ ದಾಳಿ ನಡೆಸಿ ಬಂಧಿಸಿತ್ತು. ಈ ಸಂದರ್ಭ ನಾಲ್ಕು ಮೊಬೈಲ್ ಫೋನ್, ಒಂದು ಟ್ಯಾಬ್ಲೆಟ್, ಇಲೆಕ್ಟ್ರಾನಿಕ್ಸ್ ಸಾಧನಗಳು, ಲೆಕ್ಕಪತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೋಮವಾರ ರಜೌರಿ ಜಿಲ್ಲೆಯ ನೌಶೆರಾ ನಗರದಲ್ಲಿರುವ ಬೆಹಾಲ್‌ನ ಪೂರ್ವಜರ ಮನೆ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.