ಅಮೆರಿಕ: ಯಶಸ್ವಿ ನಿರಾಯುಧ ಖಂಡಾಂತರ ಕ್ಷಿಪಣಿ ಪರೀಕ್ಷೆ
Update: 2017-08-02 20:43 IST
ವ್ಯಾಂಡನ್‌ಬರ್ಗ್ (ಅಮೆರಿಕ), ಆ. 2: ಅಮೆರಿಕ ವಾಯುಪಡೆ ಕ್ಯಾಲಿಫೋರ್ನಿಯದಿಂದ ಶಸ್ತ್ರರಹಿತ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಯೊಂದರ ಹಾರಾಟವನ್ನು ಬುಧವಾರ ಯಶಸ್ವಿಯಾಗಿ ನಡೆಸಿದೆ. ಇದು ಈ ವರ್ಷ ನಡೆದ ಇಂಥ ನಾಲ್ಕನೆ ಪರೀಕ್ಷೆಯಾಗಿದೆ.
ಲಾಸ್ ಏಂಜಲಿಸ್‌ನಿಂದ 209 ಕಿಲೋಮೀಟರ್ ದೂರದಲ್ಲಿರುವ ವ್ಯಾಂಡನ್‌ಬರ್ಗ್ ವಾಯುಪಡೆ ನೆಲೆಯಿಂದ ಬುಧವಾರ ಮುಂಜಾನೆ 2:10ಕ್ಕೆ ‘ಮಿನಿಟ್‌ಮನ್ 3’ ಕ್ಷಿಪಣಿ ಹಾರಿತು ಎಂದು 30ನೆ ಸ್ಪೇಸ್ ವಿಂಗ್ ಹೇಳಿದೆ.
ಪರೀಕ್ಷೆಯು ಈ ಶಸ್ತ್ರ ವ್ಯವಸ್ಥೆಯ ಪರಿಣಾಮ, ಸಿದ್ಧತೆ ಮತ್ತು ನಿಖರತೆಯನ್ನು ತೋರಿಸಿದೆ ಎಂದು ವಾಯುಪಡೆಯ ಹೇಳಿಕೆಯೊಂದು ತಿಳಿಸಿದೆ.
ಮಿನಿಟ್‌ಮನ್ ಕ್ಷಿಪಣಿಗಳನ್ನು ವ್ಯಾಂಡನ್‌ಬರ್ಗ್‌ನಿಂದ ನಿಯಮಿತವಾಗಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಮರುಪ್ರವೇಶ ಸಾಮರ್ಥ್ಯ ಹೊಂದಿರುವ ಕ್ಷಿಪಣಿಗಳು ಪೆಸಿಫಿಕ್ ಸಾಗರದಲ್ಲಿ 6,800 ಕಿ.ಮೀ. ದೂರದಲ್ಲಿರುವ ಗುರಿಯನ್ನು ತಲುಪುತ್ತವೆ.